ಪರಿಸರ ನಾಶದ ದುಷ್ಪರಿಣಾಮ

Update: 2020-11-11 04:58 GMT

ಲಂಗು ಲಗಾಮಿಲ್ಲದ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಜಗತ್ತಿನಲ್ಲಿ ಆಗಾಗ ನೈಸರ್ಗಿಕ ಪ್ರಕೋಪಗಳು ಸಂಭವಿಸುತ್ತಲೇ ಇವೆ. ಹವಾಮಾನ ವೈಪರೀತ್ಯಗಳಿಗೂ ಪರಿಸರದ ಮೇಲೆ ನಾಗರಿಕ ಸಮಾಜ ನಡೆಸಿದ ದಾಳಿಗಳೇ ಕಾರಣ ಎಂದು ವೈಜ್ಞಾನಿಕ ವರದಿಗಳು ತಿಳಿಸುತ್ತವೆ. ಶರವೇಗದಲ್ಲಿ ಸಾಗುತ್ತಿರುವ ನಗರೀಕರಣದ ಪ್ರಕ್ರಿಯೆಯಿಂದಾಗಿ ಪ್ರಕೃತಿಯಲ್ಲಿ ಅಸಮತೋಲನ ಹೆಚ್ಚುತ್ತಿದೆ. ಲಾಭಕೋರ ಬಂಡವಾಳಶಾಹಿಯ ಅಭಿವೃದ್ಧಿ ಮಾರ್ಗದ ಹುಚ್ಚು ಹೊಳೆಯಲ್ಲಿ ಮನುಕುಲ ವಿನಾಶದತ್ತ ಸಾಗಿದೆ. ಇಂಗಾಲದ ಡೈ ಆಕ್ಸೈಡ್ ಹೊರ ಸೂಸುವುದನ್ನು ಕಡಿಮೆ ಮಾಡಬೇಕೆಂದು ಮಾತಾಡಿದ್ದೇ ಆಯಿತು. ಆದರೆ ನಿರೀಕ್ಷಿಸಿದ ಗುರಿ ಸಾಧಿಸಲು ಈ ವರೆಗೆ ಸಾಧ್ಯವಾಗಲಿಲ್ಲ. ಇದೆಲ್ಲದರ ಪರಿಣಾಮವಾಗಿ ವಿಶ್ವದ ಸುಮಾರು ನೂರು ನಗರಗಳು ಜಲಕಂಟಕ ಎದುರಿಸಲಿವೆ. ಈ ನೂರು ನಗರಗಳಲ್ಲಿ ಭಾರತದ ಮೂವತ್ತು ನಗರಗಳು ಸೇರಿವೆ. ಈ ಮೂವತ್ತು ನಗರಗಳಲ್ಲಿ ನಮ್ಮ ರಾಜ್ಯದ ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡಗಳಿರುವುದು ಆತಂಕಕಾರಿ ಸಂಗತಿಯಾಗಿದೆ. ನೀರಿಗೆ ಸಂಬಂಧಪಟ್ಟಂತೆ ಜಾಗತಿಕ ಮಟ್ಟದಲ್ಲಿ ಅಧ್ಯಯನ ಮಾಡುತ್ತ ಬಂದಿರುವ ಡಬ್ಲ್ಯುಡಬ್ಲ್ಯುಎಫ್ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ 2050ರ ವೇಳೆಗೆ ಈ ಅಪಾಯ ಎದುರಾಗಲಿದೆ.

ಜಲಕಂಟಕವೆಂದರೆ ಬರೀ ಕುಡಿಯುವ ನೀರಿನ ಅಭಾವವಲ್ಲ. ಮಳೆಗಾಲದಲ್ಲಿ ದಿಢೀರ್ ಪ್ರವಾಹಗಳು ಬಂದು ನಗರಕ್ಕೆ ನಗರಗಳೇ ಮುಳುಗುವ ಅಪಾಯವಿದೆ.ಜಲ ಮೂಲಗಳು ಬತ್ತಿ ಹೋಗುತ್ತವೆ. ಕೆರೆಗಳು ಕಣ್ಮರೆಯಾಗುತ್ತವೆ. ಒಟ್ಟಾರೆ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತದೆ. ಇದಕ್ಕಾಗಿ ಮೂವತ್ತು ವರ್ಷ ಕಾಯಬೇಕಾಗಿಲ್ಲ. ಈಗಾಗಲೇ ನಮ್ಮ ಅನೇಕ ನಗರಗಳಲ್ಲಿ ಈ ಪರಿಸ್ಥಿತಿ ಇದೆ. ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಈ ಪರಿಸ್ಥಿತಿ ಉಂಟಾಗುತ್ತದೆ. ಬಹುದೊಡ್ಡ ಬಡಾವಣೆಗಳೇ ನೀರಿನಲ್ಲಿ ಮುಳುಗುತ್ತವೆ.ಮನೆಗಳು ಕುಸಿದು ಬೀಳುತ್ತವೆ. ಇನ್ನು ಮೂವತ್ತು ವರ್ಷಗಳಲ್ಲಿ ಇದು ಇನ್ನಷ್ಟು ತೀವ್ರ ಸ್ವರೂಪ ತಾಳಲಿದೆ. ಆದರೂ ನಮ್ಮ ಸರಕಾರ, ನಾಗರಿಕ ಸಮಾಜಗಳು ಈ ಅಪಾಯದ ಅರಿವಿದ್ದರೂ ಮೈ ಮರೆತು ವರ್ತಿಸುತ್ತಿವೆ. ನಗರಗಳಿಗೆ ವಲಸೆ ಪ್ರಮಾಣ ಹೆಚ್ಚುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಜನಸಂಖ್ಯಾ ಪ್ರಮಾಣ ಒಂದೂವರೆ ಕೋಟಿಗೆ ಸಮೀಪಿಸುತ್ತಿದೆ. ಈ ಜನಸಂಖ್ಯೆಗೆ ತಕ್ಕ ಮೂಲಭೂತ ಸೌಕರ್ಯಗಳ ಅಭಾವ ಎದ್ದು ಕಾಣುತ್ತದೆ. ಕೆರೆಗಳ ಸಮಾಧಿಯ ಮೇಲೆ ಬಡಾವಣೆಗಳು ಮತ್ತು ಬಹು ಅಂತಸ್ತಿನ ಕಟ್ಟಡಗಳು ಎದ್ದು ನಿಲ್ಲುತ್ತಿವೆ. ಹೀಗಾಗಿ ಜನಸಂಖ್ಯಾ ಒತ್ತಡಗಳಿಂದ ನಮ್ಮ ನಗರಗಳು ತತ್ತರಿಸಿ ಹೋಗಿವೆ.

ಬೆಂಗಳೂರಿನಂತಹ ನಗರಗಳಲ್ಲಿ ರಾಜ ಕಾಲುವೆಯನ್ನು ಆಕ್ರಮಿಸಿ ಅಕ್ರಮ ಮನೆಗಳನ್ನು ನಿರ್ಮಿಸಲಾಗಿದೆ. ರಿಯಲ್ ಎಸ್ಟೇಟ್ ಮಾಫಿಯಾ ಆಗಲೇ ಕೆರೆಗಳನ್ನು ಮಟಾ -ಮಾಯ ಮಾಡಿರುವುದರಿಂದ ಮಳೆಯ ನೀರು ಇಂಗಲು ಜಾಗವಿಲ್ಲ. ಮಳೆ ನೀರು ಹೋಗಲು ದಾರಿಯಿಲ್ಲದೆ ಮನೆಯೊಳಗೆ, ಬಡಾವಣೆಯೊಳಗೆ ಹರಿಯುತ್ತದೆ. ಹೀಗಾಗಿ ಸಾಮಾನ್ಯ ಮಳೆಗೂ ನಗರ ತತ್ತರಿಸಿ ಹೋಗುತ್ತಿದೆ. ಹುಬ್ಬಳ್ಳಿ -ಧಾರವಾಡಗಳಲ್ಲೂ ಇದೇ ಸ್ಥಿತಿ ಉಂಟಾಗಿದೆ. ಇನ್ನು ಮೂವತ್ತು ವರ್ಷಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಕಾರಣ ಸರಕಾರ ಈಗಲೇ ಎಚ್ಚೆತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

ಬೆಂಗಳೂರು, ಹುಬ್ಬಳ್ಳಿಯಂತಹ ನಗರಗಳನ್ನು ಈ ಅಪಾಯದಿಂದ ಪಾರು ಮಾಡಬೇಕೆಂದರೆ ಸೂಕ್ತ ಉಪಕ್ರಮಗಳನ್ನು ಕೈಗೊಳ್ಳಬೇಕು. ಈ ನಗರಗಳ ಕೆರೆ ಬಾವಿಗಳಿಗೆ ಪುನಶ್ಚೇತನ ನೀಡಬೇಕು. ಮಳೆ ಕೊಯ್ಲು ಹಾಗೂ ಜಲ ಮರು ಪೂರಣದಂತಹ ಯೋಜನೆಗಳನ್ನು ರೂಪಿಸಬೇಕು. ಬೆಂಗಳೂರಿನ ಕೆರೆ ಹಾಗೂ ರಾಜ ಕಾಲುವೆಗಳ ಒತ್ತುವರಿಯ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಈಗಾಗಲೇ ಅನೇಕ ಬಾರಿ ರಾಜ್ಯ ಸರಕಾರ ಹಾಗೂ ನಗರಾಡಳಿತಕ್ಕೆ ಎಚ್ಚರಿಕೆ ನೀಡಿದರೂ ಸರಕಾರ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ.

ಇನ್ನು ಮುಂದಿನ ದಿನಗಳು ಆತಂಕಕಾರಿಯಾಗಿವೆ. ಈ ಜಲ ಕಂಟಕಗಳು ಪ್ರತಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಅಪಾಯವಿದೆ. ಸರಕಾರದ ನಿರ್ಲಕ್ಷ ಹಾಗೂ ಭ್ರಷ್ಟ ಆಡಳಿತ ವರ್ಗದ ಬೇಜವಾಬ್ದಾರಿತನದಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಂಭವವಿದೆ. ಬರೀ ಸ್ಮಾರ್ಟ್ ಸಿಟಿಯೆಂದು ಘೋಷಿಸಿದರೆ ಸಾಲದು, ಅದಕ್ಕೆ ಪೂರಕವಾಗಿ ಸರಕಾರ ಕ್ರಮ ಕೈಗೊಳ್ಳಬೇಕು.

ಅಂತರ್‌ರಾಷ್ಟ್ರೀಯ ಮಟ್ಟದ ಅಧ್ಯಯನ ವರದಿಗಳು ನೀಡಿದ ಎಚ್ಚರಿಕೆಯ ನಂತರವೂ ಸರಕಾರ ಜಾಗ್ರತವಾಗದಿದ್ದರೆ ಜನರನ್ನು ತೀವ್ರ ಸಂಕಷ್ಟಕ್ಕೆ ದೂಡಿದ ಹೊಣೆಯನ್ನು ಸರಕಾರ ಹೊರಬೇಕಾಗುತ್ತದೆ.

ಜನಸಂಖ್ಯಾ ಒತ್ತಡ ಇಲ್ಲಿಗೆ ನಿಲ್ಲುವುದಿಲ್ಲ. ಕೊರೋನ ಪರಿಣಾಮವಾಗಿ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ನಗರಗಳ ಮೇಲೆ ಇನ್ನೂ ಒತ್ತಡ ಹೆಚ್ಚಲಿದೆ. ವಲಸೆ ಪ್ರಮಾಣವೂ ಹೆಚ್ಚಾಗಲಿದೆ. ಭಾರತದಲ್ಲಿ ಬೆಂಗಳೂರು, ಹುಬ್ಬಳ್ಳಿ ಮಾತ್ರವಲ್ಲ ಜೈಪುರ, ಇಂದೋರ್, ವಡೋದರಾ, ಶ್ರೀನಗರ, ರಾಜಕೋಟ್, ನಾಸಿಕ್, ವಿಶಾಖ ಪಟ್ಟಣ, ಕೋಲ್ಕತಾ, ಅಹಮದಾಬಾದ್, ಜಬಲ್‌ಪುರ, ಮುಂಬೈ, ಲಕ್ನೊ, ಚಂಡಿಗಡ, ಅಮೃತಸರ, ಲುಧಿಯಾನ ಜಲಂಧರ್, ಕೋಟಾ, ಪುಣೆ, ಧನಬಾದ್, ಭೋಪಾಲ್, ಗ್ವಾಲಿಯರ್, ಸೂರತ್, ದಿಲ್ಲಿ,ಅಲಿಗಡ, ಕೋಝಿಕ್ಕೋಡ್, ಕಣ್ಣೂರು ನಗರಗಳು 2050ರ ವೇಳೆಗೆ ಜಲ ಕಂಟಕದ ಅಪಾಯವನ್ನು ಎದುರಿಸಲಿವೆ.ಅಪಾಯ ಎದುರಿಸುವ ನಗರಗಳಲ್ಲಿ ಜೈಪುರ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಹತ್ತನೇ ಸ್ಥಾನದಲ್ಲಿ ಇದೆ.ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಹದಿನಾರನೇ ಸ್ಥಾನದಲ್ಲಿ ಇವೆ.

 ಸರಕಾರ ಈಗ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಉಲ್ಬಣಗೊಳ್ಳಲಿದೆ. ತಕ್ಷಣ ಕೆರೆಗಳಿಗೆ ಮರು ಜೀವ ನೀಡಬೇಕು. ಅವುಗಳ ಮರುಪೂರಣಕ್ಕೆ ಆದ್ಯತೆ ನೀಡಬೇಕು. ಈಗಾಗಲೇ ಬೆಂಗಳೂರಿನ ಬಾಶೆಟ್ಟಿಹಳ್ಳಿ ಕೆರೆ ಚೌಗು ಪ್ರದೇಶ ಮತ್ತು ಇಂದೋರ್‌ನ ಶ್ರೀಪುರ ಕೆರೆ ಸಂರಕ್ಷಣೆ ಮಾಡಿದ ಮಾದರಿಯಲ್ಲಿ ಉಳಿದ ಕೆರೆ ಕಟ್ಟೆಗಳನ್ನು ಸಂರಕ್ಷಿಸಿದರೆ ಮಾತ್ರ ಈ ಅಪಾಯದಿಂದ ಪಾರಾಗಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News