ನನಗೆ ಜಯ ತಪ್ಪಿಸಲು ತಡವಾಗಿ ಲಸಿಕೆ ಘೋಷಣೆ: ಟ್ರಂಪ್
ವಾಶಿಂಗ್ಟನ್, ನ. 10: ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಸಿದ್ಧವಾಗಿರುವುದಕ್ಕೆ ಸಂಬಂಧಿಸಿದ ಘೋಷಣೆಯನ್ನು ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಮತ್ತು ಫೈಝರ್ ಕಂಪೆನಿಯು ಚುನಾವಣೆ ಮುಗಿಯುವವರೆಗೆ ತಡೆಹಿಡಿದಿದ್ದವು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಆರೋಪಿಸಿದ್ದಾರೆ. ನನಗೆ ಚುನಾವಣೆಯಲ್ಲಿ ಲಸಿಕೆಯ ಯಶಸ್ಸನ್ನು ನಿರಾಕರಿಸಲು ಹೀಗೆ ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
‘‘ಅವೆುರಿಕದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಮತ್ತು ಡೆಮಾಕ್ರಟಿಕರಿಗೆ, ಚುನಾವಣೆಯ ಮುನ್ನ ಲಸಿಕೆ ಸಂಶೋಧನೆಯ ಯಶಸ್ಸು ನನಗೆ ಸಿಗುವುದು ಬೇಕಿರಲಿಲ್ಲ. ಹಾಗಾಗಿ ಘೋಷಣೆಯು ಐದು ದಿನಗಳ ಬಳಿಕ ಬಂತು. ನಾನು ಹೇಳಿಕೊಂಡು ಬಂದಿರುವಂತೆಯೇ ಎಲ್ಲಾ ಆಗಿದೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ತನ್ನ ಕೋವಿಡ್-19 ಲಸಿಕೆಯು ಕೊರೋನ ಸೋಂಕಿತರಲ್ಲಿ 90 ಶೇಕಡಕ್ಕೂ ಅಧಿಕ ಪರಿಣಾಮ ಬೀರಿರುವುದು ಮೂರನೇ ಹಂತದ ವೈದ್ಯಕೀಯ ಪ್ರಯೋಗದಲ್ಲಿ ಸಾಬೀತಾಗಿದೆ ಎಂಬುದಾಗಿ ಔಷಧ ತಯಾರಿಕಾ ಕಂಪೆನಿ ಫೈಝರ್ ಸೋಮವಾರ ಘೋಷಿಸಿತ್ತು.