ಫೈಝರ್ ಲಸಿಕೆಗೆ ಬೇಕು ಮೈನಸ್ 70 ಡಿಗ್ರಿ ಸೆಲ್ಸಿಯಸ್ ತಂಪು
ನ್ಯೂಯಾರ್ಕ್, ನ. 10: ತಾವು ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆ 90 ಶೇಕಡಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬುದಾಗಿ ಔಷಧ ತಯಾರಿಕಾ ಕಂಪೆನಿ ಫೈಝರ್ ಮತ್ತು ಬಯೋಎನ್‌ಟೆಕ್ ಸಂಸ್ಥೆ ಸೋಮವಾರ ಘೋಷಿಸಿವೆಯಾದರೂ, ಲಸಿಕೆಯು ಸ್ಥಳೀಯ ಔಷಧಿ ಅಂಗಡಿಗಳು ಮತ್ತು ಜನಸಾಮಾನ್ಯರಿಗೆ ಶೀಘ್ರದಲ್ಲಿ ಸಿಗುವ ಲಕ್ಷಣಗಳಿಲ್ಲ.
ಲಸಿಕೆಯ ಸುರಕ್ಷತೆಗೆ ಸಂಬಂಧಿಸಿದ ಅಂಕಿಅಂಶಗಳು ಇನ್ನಷ್ಟೇ ಬರಬೇಕಾಗಿದೆ. ಲಸಿಕೆಯು ಆರೋಗ್ಯ ಕ್ಷೇತ್ರದ ಕೆಲಸಗಾರರಿಗೆ ಮತ್ತು ನರ್ಸಿಂಗ್ ಹೋಮ್‌ಗಳಲ್ಲಿ ಇರುವವರಿಗೆ ಮೊದಲು ಸಿಗಬಹುದು.
ಆದರೆ, ಲಸಿಕೆಯನ್ನು ಅತಿ-ಶೀತಲ ಶೈತ್ಯಾಗಾರದಲ್ಲಿ ಸಂಗ್ರಹಿಸಿಡಬೇಕಾಗಿದ್ದು, ಅಮೆರಿಕದ ಸುಸಜ್ಜಿತ ಆಸ್ಪತ್ರೆಗಳಿಗೂ ಸವಾಲಾಗಿದೆ. ಇದು ಬಡತನದ ಪ್ರದೇಶಗಳು ಮತ್ತು ಬಡ ದೇಶಗಳಿಗೆ ಲಸಿಕೆಯ ವಿತರಣೆಗಿರುವ ದೊಡ್ಡ ಸವಾಲಾಗಿದೆ. ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಉಷ್ಣತೆಯಲ್ಲಿ ಸಂಗ್ರಹಿಸಿಡಬೇಕಾಗಿದೆ.
‘‘ಇಷ್ಟು ಕಡಿಮೆ ಉಷ್ಣತೆಯಲ್ಲಿ ಲಸಿಕೆಯನ್ನು ಸಂಗ್ರಹಿಸಿಡಬೇಕಾಗುವುದರಿಂದ ಅದರ ವಿತರಣೆಯು ಅತ್ಯಂತ ದೊಡ್ಡ ಸವಾಲಾಗಿದೆ’’ ಎಂದು ಜಾನ್ಸ್ ಹಾಪ್‌ಕಿನ್ಸ್ ಸೆಂಟರ್ ಫಾರ್ ಹೆಲ್ತ್ ಸೆಕ್ಯುರಿಟಿಯಲ್ಲಿ ಹಿರಿಯ ವಿದ್ವಾಂಸರಾಗಿರುವ ಆಮಿಶ್ ಅಡಲ್ಜ ಹೇಳುತ್ತಾರೆ.
ಹಾಗಾಗಿ, ಲಸಿಕೆಯನ್ನು ಏಶ್ಯ, ಆಫ್ರಿಕ ಮತ್ತು ಲ್ಯಾಟಿನ್ ಅವೆುರಿಕ ದೇಶಗಳಲ್ಲಿ ಬಳಸುವುದು ದೊಡ್ಡ ಸವಾಲಾಗಿದೆ. ಈ ದೇಶಗಳಲ್ಲಿ ಬಿಸಿ ಹವಾಮಾನ ಇರುವುದು ಮಾತ್ರವಲ್ಲದೆ, ಸೂಕ್ತ ಮೂಲಸೌಕರ್ಯಗಳ ಕೊರತೆಯನ್ನೂ ಎದುರಿಸುತ್ತಿವೆ.