ಕುಂಬಳ ನಿಮ್ಮ ಹೃದಯವನ್ನು ಸುರಕ್ಷಿತವಾಗಿರಿಸುತ್ತದೆ

Update: 2020-11-10 18:51 GMT

ಸಾಮಾನ್ಯ ತರಕಾರಿಯಾಗಿರುವ ಕುಂಬಳ ಕಾಯಿ ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿರುತ್ತದೆ,ಆದರೆ ಅದರಲ್ಲಿ ವಿಟಾಮಿನ್‌ಗಳು ಮತ್ತು ಖನಿಜಗಳಂತಹ ಪೋಷಕಾಂಶಗಳು ಹೇರಳವಾಗಿರುತ್ತವೆ. ಕುಂಬಳದ ಎಲೆಗಳು,ಬೀಜ,ರಸ ಇವೆಲ್ಲ ನಮ್ಮ ಶರೀರಕ್ಕೆ ಆರೋಗ್ಯಲಾಭಗಳನ್ನು ನೀಡುತ್ತವೆ.

* ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ

 ಪೊಟ್ಯಾಷಿಯಂ,ವಿಟಾಮಿನ್ ಸಿ ಮತ್ತು ನಾರಿನಂತಹ ಪೋಷಕಾಂಶಗಳು ಕುಂಬಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಇವು ಹೃದಯದ ಆರೋಗ್ಯಕ್ಕೆ ಪೂರಕವಾಗಿವೆ. ಕುಂಬಳವನ್ನು ಪ್ರತಿದಿನ ಸೇವಿಸುವುದರಿಂದ ಹೃದಯವು ಆರೋಗ್ಯಯುತವಾಗಿರುತ್ತದೆ ಮತ್ತು ಹೃದಯ ರೋಗಗಳಿಗೆ ಗುರಿಯಾಗುವ ಅಪಾಯವು ಕಡಿಮೆಯಾಗುತ್ತದೆ.

* ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ

 ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಕಣ್ಣಿನ ದೃಷ್ಟಿಯೂ ಕುಂದುತ್ತ ಹೋಗುತ್ತದೆ. ಸರಿಯಾದ ಪ್ರಮಾಣದಲ್ಲಿ ಸರಿಯಾದ ಪೋಷಕಾಂಶಗಳನ್ನು ಸೇವಿಸುವ ಮೂಲಕ ಈ ಅಪಾಯವನ್ನು ಕಡಿಮೆ ಮಾಡಬಹುದು. ವಯಸ್ಸಾದಾಗಲೂ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಬಲ್ಲ ವಿಶೇಷ ಪೋಷಕಾಂಶಗಳಾದ ವಿಟಾಮಿನ್ ಎ,ಸಿ ಮತ್ತು ಇ ಕುಂಬಳದಲ್ಲಿವೆ. ಅದು ಫ್ರೀ ರ್ಯಾಡಿಕಲ್‌ಗಳು ಕಣ್ಣುಗಳ ಕೋಶಗಳಿಗೆ ಹಾನಿಯನ್ನುಂಟು ಮಾಡುವುದನ್ನು ತಡೆಯುತ್ತದೆ.

* ತೂಕ ಇಳಿಸಿಕೊಳ್ಳಲು ಪೂರಕ

ಕುಂಬಳದಲ್ಲಿ ಕಡಿಮೆ ಕ್ಯಾಲರಿಗಳು ಮತ್ತು ಅಧಿಕ ನಾರು ಇರುವುದರಿಂದ ಇವೆರಡೂ ಬಹಳ ಹೊತ್ತು ಹೊಟ್ಟೆ ತುಂಬಿರುವಂತೆ ಮಾಡುತ್ತವೆ. ಇದರಿಂದ ಅನಗತ್ಯವಾಗಿ ತಿನ್ನುವುದು ಕಡಿಮೆಯಾಗುತ್ತದೆ ಮತ್ತು ಶರೀರದ ತೂಕವನ್ನು ಕಾಯ್ದುಕೊಳ್ಳಬಹುದು.

* ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹ ನಿಯಂತ್ರಣ ಕುಂಬಳದ ಪ್ರಮುಖ ಆರೋಗ್ಯ ಲಾಭವಾಗಿದೆ. ಅದು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸುವ ಮೂಲಕ ಮಧುಮೇಹ ನಿರ್ವಹಣೆಯಲ್ಲಿ ನೆರವಾಗುತ್ತದೆ.

* ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ

ಕುಂಬಳ ಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿರುವ ಬೀಟಾ ಕ್ಯಾರಟಿನ್ ಪ್ರೊಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅದು ಕರುಳು ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನೂ ತಗ್ಗಿಸುತ್ತದೆ.

*ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

 ಕುಂಬಳಕಾಯಿಯಲ್ಲಿ ಹಲವಾರು ಪೋಷಕಾಂಶಗಳಿದ್ದು,ಇವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ. ಇದರಲ್ಲಿ ಹೇರಳವಾಗಿರುವ ವಿಟಾಮಿನ್ ಎ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುವಲ್ಲಿ ಮುಖ್ಯಪಾತ್ರವನ್ನು ಹೊಂದಿದೆ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News