ಗುರುಗ್ರಾಮ: ಪಟಾಕಿ ಬಳಕೆಗೆ ಸಂಪೂರ್ಣ ನಿಷೇಧ

Update: 2020-11-11 14:46 GMT

ಚಂಡೀಗಢ, ನ.11: ಹಬ್ಬದ ಸಂದರ್ಭದಲ್ಲಿ ಎರಡು ಗಂಟೆ ಪಟಾಕಿಗಳನ್ನು ಸಿಡಿಸಲು ಹರ್ಯಾಣ ಸರಕಾರ ಅನುಮತಿ ನೀಡಿದ ಮೂರು ದಿನಗಳಲ್ಲೇ, ರಾಜ್ಯದ ಗುರುಗ್ರಾಮದಲ್ಲಿ ಪಟಾಕಿ ಬಳಕೆಯನ್ನು ಸಂಪೂರ್ಣ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಪ್ರದೇಶದಲ್ಲಿ ಈಗಾಗಲೇ ವಾಯುಮಾಲಿನ್ಯದ ಸಮಸ್ಯೆ ಹೆಚ್ಚಿದೆ. ಪಟಾಕಿ ಸಿಡಿಸುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುಗ್ರಾಮ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಖತ್ರಿ ಹೇಳಿದ್ದಾರೆ.

ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್‌ಜಿಟಿ) ನವೆಂಬರ್ 30ರವರೆಗೆ ಪಟಾಕಿ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ ಮತ್ತು ಎನ್‌ಜಿಟಿಯ ಆದೇಶ ಇತರ ಎಲ್ಲಾ ಆದೇಶಗಳನ್ನೂ ರದ್ದುಗೊಳಿಸಿದೆ. ಆದ್ದರಿಂದ ಗುರುಗ್ರಾಮದಲ್ಲಿ ಹಬ್ಬದ ಸಂದರ್ಭ ಪಟಾಕಿ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತದ ಆದೇಶ ತಿಳಿಸಿದೆ. ಈ ಮಧ್ಯೆ, ಉತ್ತರಪ್ರದೇಶದ 13 ನಗರಗಳಲ್ಲಿ ನವೆಂಬರ್ 9ರಿಂದ ನವೆಂಬರ್ 30ರ ಮಧ್ಯರಾತ್ರಿವರೆಗೆ ಪಟಾಕಿ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಉತ್ತರಪ್ರದೇಶ ಸರಕಾರ ಹೇಳಿದೆ. ವಾರಣಾಸಿ, ಮುಝಫ್ಫರ್ ನಗರ, ಬಾಘ್‌ಪತ್, ಆಗ್ರಾ, ಗ್ರೇಟರ್‌ನೋಯ್ಡಾ, ಮೀರತ್, ಹಾಪುರ್, ಗಾಝಿಯಾಬಾದ್, ಮೊರಾದಾಬಾದ್, ಕಾನ್ಪುರ, ಲಕ್ನೋ, ನೋಯ್ಡಾ ಮತ್ತು ಬುಲಂದ್‌ಶಹರ್‌ನಲ್ಲಿ ನಿಷೇಧ ಅನ್ವಯಿಸಲಿದ್ದು, ಆದೇಶ ಪಾಲನೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ನಗರಗಳ ಪೊಲೀಸ್ ಮುಖ್ಯಸ್ಥರಿಗೆ ಲಕ್ನೊ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News