ರವಿವಾರ ಎನ್‌ಡಿಎ ಸಭೆಯಲ್ಲಿ ಮುಂದಿನ ಸಿಎಂ ಬಗ್ಗೆ ನಿರ್ಧಾರ: ನಿತೀಶ್ ಕುಮಾರ್

Update: 2020-11-13 17:15 GMT

ಹೊಸದಿಲ್ಲಿ, ನ.13: ನವೆಂಬರ್ 15ರಂದು (ರವಿವಾರ) ನಡೆಯಲಿರುವ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಬಿಹಾರದ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸಲಾಗುತ್ತದೆ ಎಂದು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಹೇಳಿದ್ದಾರೆ. ಶಾಸಕಾಂಗ ಪಕ್ಷದ ಸಭೆ ರವಿವಾರ ಮಧ್ಯಾಹ್ನ 12.30ಕ್ಕೆ ನಡೆಯಲಿದ್ದು ಇಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ.

ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ನಿತೀಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಚುನಾವಣೆಗೂ ಮುನ್ನ ಮಾತುಕೊಟ್ಟಂತೆ ನಿತೀಶ್ ಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರೂ, ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ನಿತೀಶ್, ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಎನ್‌ಡಿಎ ಮೈತ್ರಿಕೂಟ ನಿರ್ಧರಿಸಲಿದೆ ಎಂದಿದ್ದರು.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ 75 ಸ್ಥಾನ ಗೆಲ್ಲುವುದರೊಂದಿಗೆ ಅತೀ ದೊಡ್ಡ ಪಕ್ಷವಾಗಿ ಮೂಡಿಬಂದಿದ್ದರೆ, ಬಿಜೆಪಿ 74 ಸ್ಥಾನ ಗೆದ್ದಿದೆ. ಆದರೆ ನಿತೀಶ್ ನೇತೃತ್ವದ ಜೆಡಿಯು ಕೇವಲ 43 ಸ್ಥಾನ ಗೆಲ್ಲುವುದರೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ. ಎನ್‌ಡಿಎ ಮೈತ್ರಿಕೂಟ ಒಟ್ಟು 125 ಸ್ಥಾನಗಳಲ್ಲಿ ಗೆದ್ದು ಸರಳ ಬಹುಮತ ಪಡೆಯಲು ಶಕ್ತವಾಗಿದೆ. ಗುರುವಾರ ನಿತೀಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ‘ ನಿತೀಶ್ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದಿದ್ದು ಜನತೆ ಅವರನ್ನು ತಿರಸ್ಕರಿಸಿರುವುದು ಸ್ಪಷ್ಟವಾಗಿದೆ. ಅವರು ಮತ್ತೆ ಮುಖ್ಯಮಂತ್ರಿ ಕುರ್ಚಿ ಪಡೆಯಬಹುದು, ಆದರೆ ನಾವು ಜನರ ಹೃದಯದಲ್ಲಿದ್ದೇವೆ’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News