ಕೊರೋನ ಲಸಿಕೆ: ನಮ್ಮ ಮುಂದಿರುವ ಅಪಾಯ!

Update: 2020-11-14 05:08 GMT

ಕೊರೋನ ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲೇ ‘ಪತಂಜಲಿ’ ಎನ್ನುವ ಸಂಸ್ಥೆ ಆತುರಾತುರವಾಗಿ ‘ಕೊರೋನಕ್ಕೆ ಔಷಧಿ ಕಂಡು ಹಿಡಿದಿದ್ದೇವೆ’ ಎಂದು ಮಾಧ್ಯಮಗಳ ಮೂಲಕ ಘೋಷಿಸಿ ವ್ಯಾಪಕ ಟೀಕೆಗಳನ್ನು ಎದುರಿಸಿತು. ಕೊನೆಗೂ ಅದು ಕೊರೋನ ವಿರುದ್ಧದ ಔಷಧಿಯಲ್ಲ ಎನ್ನುವುದೂ ಬಹಿರಂಗವಾಯಿತು. ಆಯುರ್ವೇದದ ಹೆಸರನ್ನು ಬಳಸಿಕೊಂಡು ಕೋಟ್ಯಂತರ ರೂ. ಸಂಪಾದಿಸಿರುವ ಈ ಪತಂಜಲಿ ಸಂಸ್ಥೆಯ ನಕಲಿ ಮುಖವೊಂದು ಕೊರೋನ ಔಷಧಿಯ ಮೂಲಕ ಬೆಳಕಿಗೆ ಬಂತು. ಇದು ಕೇವಲ ಪತಂಜಲಿಯಂತಹ ಸಂಸ್ಥೆಗಷ್ಟೇ ಸೀಮಿತವಾಗಿ ಉಳಿದಿಲ್ಲ. ಈಗಲೂ ವಿಶ್ವದ ಹತ್ತು ಹಲವು ಸಂಸ್ಥೆಗಳು ಕೊರೋನ ಲಸಿಕೆಗಳನ್ನು ಮಾರುಕಟ್ಟೆಗೆ ತರಲು ಸ್ಪರ್ಧೆ ನಡೆಸುತ್ತಿವೆ.

ಲಸಿಕೆಗಳು ಸಾರ್ವಜನಿಕ ಆರೋಗ್ಯದ ಸುಧಾರಣೆ ಹಾಗೂ ಮಾನವ ಜೀವಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಲಸಿಕೆಗಳು ಅಗಾಧವಾದ ಲಾಭವನ್ನು ಗಳಿಸಿಕೊಡುವ ದಂಧೆಯಾಗಿಬಿಟ್ಟಿದೆ ಎಂಬುದು ಅಷ್ಟೇ ಕಹಿಯಾದ ಸತ್ಯವಾಗಿದೆ. ಈ ಹಿನ್ನೆಲೆಯಲ್ಲೇ ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೋವಿಡ್-19 ಸೋಂಕು ರೋಗಕ್ಕೆ ಲಸಿಕೆಯನ್ನು ಉತ್ಪಾದಿಸಲು ವಿವಿಧ ದೇಶಗಳ ಔಷಧಿ ಕಂಪೆನಿಗಳು ತರಾತುರಿಯಲ್ಲಿ ಸಂಶೋಧನೆಗಳನ್ನು ನಡೆಸುತ್ತಿವೆ. ಈ ಲಸಿಕೆಯ ಮೇಲೆ ಹಣ ಹೂಡಿದ ಸಂಸ್ಥೆಗಳೇ, ಕೊರೋನವನ್ನು ಜಗತ್ತಿನಾದ್ಯಂತ ಭೀಕರ ರೋಗವಾಗಿ ಪರಿವರ್ತಿಸಿವೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಕೊರೋನ ಹರಡುವಿಕೆಯ ಸಂಖ್ಯೆಯಲ್ಲಿ ಇಳಿಮುಖವಾದರೆ ಲಸಿಕೆಗಳಿಗೆ ಹೂಡಿದ ಬಂಡವಾಳ ವ್ಯರ್ಥವಾಗಬಹುದೆಂಬ ಆತಂಕಗಳು ಇವರಲ್ಲಿವೆೆ. ಆದುದರಿಂದಲೇ ಲಸಿಕೆ ಕಂಡು ಹಿಡಿಯುವವರೆಗೂ ಮಾಧ್ಯಮಗಳ ಮೂಲಕ ಕೊರೋನ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾ, ಜನಸಾಮಾನ್ಯರನ್ನು ಭಯ ಬೀಳಿಸುತ್ತಲೇ ಇರುತ್ತದೆ. ಲಸಿಕೆಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸುತ್ತಿರುವುದರ ಬಗ್ಗೆ ವಿವಿಧ ದೇಶಗಳ ವಿಜ್ಞಾನಿಗಳು ಈಗಾಗಲೇ ಆತಂಕ ವ್ಯಕ್ತಪಡಿಸಿದ್ದಾರೆ. ಲಸಿಕೆಯ ಸಾಧಕ ಬಾಧಕಗಳನ್ನು ಸಮರ್ಪಕವಾಗಿ ಅರಿಯದೆ ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ ರೋಗದ ತೀವ್ರತೆಯು ಇನ್ನಷ್ಟು ಗಂಭೀರವಾಗುವ ಅಪಾಯವಿದೆ ಎಂದವರು ಎಚ್ಚರಿಸುತ್ತಿದ್ದಾರೆ. ಡೆಂಗಿ ಜ್ವರ ಹಾಗೂ ಬಾಲ್ಯಾವಸ್ಥೆಯಲ್ಲಿ ಕಾಡುವ ಉಸಿರಾಟದ ಸಮಸ್ಯೆಯ ಸೋಂಕು ರೋಗಕ್ಕಾಗಿ ಕಂಡುಹಿಡಿಯಲಾಗಿದ್ದ ಲಸಿಕೆಗಳು, ರೋಗವನ್ನು ಶಮನಗೊಳಿಸುವ ಬದಲು ಉಲ್ಬಣಿಸಿ ರೋಗಿಗಳಲ್ಲಿ ದುಷ್ಪರಿಣಾಮ ಬೀರಿದ ಉದಾಹರಣೆ ಈಗಾಗಲೇ ನಮ್ಮ ಮುಂದಿದೆ. ಯಾವುದೇ ರೋಗದ ವೈರಸ್‌ನ್ನು ದೇಹದಲ್ಲಿ ತಟಸ್ಥಗೊಳಿಸಲು ಪ್ರತಿಕಾಯ (ಆ್ಯಂಟಿಬಾಡಿ)ಗಳನ್ನು ಅಭಿವೃದ್ಧಿಪಡಿಸುವುದು ಲಸಿಕೆಯ ಮುಖ್ಯವಾದ ಕ್ರಿಯೆಯಾಗಿರುತ್ತದೆ. ಆದರೆ ಅಕಸ್ಮಾತ್ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವುದನ್ನು ತಟಸ್ಥಗೊಳಿಸುವಂತಹ ಅಚಾತುರ್ಯ ಸಂಯೋಜನೆಯು ಲಸಿಕೆಯಲ್ಲಿ ಇದ್ದಲ್ಲಿ ಅದು ಸಾವಿರಾರು ಜೀವಗಳನ್ನು ಬಲಿತೆಗೆದುಕೊಳ್ಳುವ ಅಪಾಯವಿದೆ. ಇಂತಹ ಆಚಾತುರ್ಯ ಈ ಹಿಂದೆ ಡೆಂಗಿ ಜ್ವರದ ವೈರಸ್‌ಗಾಗಿ ಸಂಶೋಧಿಸಲಾಗಿದ್ದ ಲಸಿಕೆಯಲ್ಲೂ ನಡೆದಿತ್ತು. ಈ ಲಸಿಕೆಯು ಡೆಂಗಿ ಜ್ವರದ ವಿರುದ್ಧ ರಕ್ಷಣೆಯನ್ನು ಒದಗಿಸುವ ಬದಲು ಪ್ರಾಥಮಿಕ ಹಂತದಲ್ಲಿ ಸೋಂಕನ್ನು ಹರಡುವಂತೆ ಮಾಡಿತ್ತು ಎನ್ನುವುದನ್ನು ಈಗಾಗಲೇ ತಜ್ಞರು ತಿಳಿಸಿದ್ದಾರೆ.

ತಂತ್ರಜ್ಞಾನದ ಏಕಪಕ್ಷೀಯ ದುರ್ಬಳಕೆ ಹಾಗೂ ಲಾಬಿಗಳ ಪ್ರಭಾವದಿಂದ ಭಾರತದಲ್ಲಿ ಬಿಡುಗಡೆ ಮಾಡಲಾದ ಪೋಲಿಯೊ ಲಸಿಕೆಯೊಂದು 17 ವರ್ಷಗಳ ಅವಧಿಯಲ್ಲಿ (2001-2017) 4.91 ಲಕ್ಷಕ್ಕೂ ಅಧಿಕ ಮಕ್ಕಳನ್ನು ಪಾರ್ಶ್ವವಾಯು ಪೀಡಿತರಾಗುವಂತೆ ಮಾಡಿರುವುದನ್ನು ಸಂಶೋಧನಾ ವರದಿಯೊಂದು ಬಹಿರಂಗಪಡಿಸಿದೆ. ಒಂದು ವೇಳೆ ಲಸಿಕೆ ನೀಡಿಕೆಯಲ್ಲಿ ಸೂಕ್ತವಾದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಲ್ಲಿ ಈ ದುರಂತವನ್ನು ತಪ್ಪಿಸಬಹುದಾಗಿತ್ತು. ಭಾರತದ ವಿವಿಧ ರಾಜ್ಯಗಳಲ್ಲಿನ ಮಕ್ಕಳು ಈ ಅಚಾತುರ್ಯಕ್ಕೆ ಬಲಿಪಶುಗಳಾಗಿದ್ದರೂ ಬಿಹಾರ ಮತ್ತು ಉತ್ತರಪ್ರದೇಶಗಳಲ್ಲಿ ಅತ್ಯಧಿಕ ಪ್ರಕರಣಗಳು ಸಂಭವಿಸಿವೆ.1980ರ ದಶಕದ ಅಂತ್ಯದಲ್ಲಿ ಪೋಲಿಯೊ ರೋಗದ ತಡೆಗಾಗಿ ಲಸಿಕೆ ಅಭಿಯಾನಗಳು ನಡೆದಿದ್ದವು. ಆ ವೇಳೆಗೆ ಜಗತ್ತಿನಾದ್ಯಂತದ 125 ದೇಶಗಳಲ್ಲಿ 3.50 ಲಕ್ಷ ಪ್ರಕರಣಗಳು ವರದಿಯಾಗಿದ್ದು, 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಬಾಧಿತರಾಗಿದ್ದರು. ಈ ಸಂದರ್ಭದಲ್ಲಿ ನೀಡಲಾದ ಲಸಿಕೆಯಿಂದಾಗಿ ಪ್ರತಿ 200 ಪೋಲಿಯೊ ಸೋಂಕು ಪ್ರಕರಣಗಳಲ್ಲಿ 1 ಪ್ರಕರಣದಲ್ಲಿ ರೋಗಬಾಧಿತ ಮಗುವಿಗೆ ಗುಣಪಡಿಸಲಾಗದಂತಹ ಪಾರ್ಶ್ವವಾಯು ಬಡಿದಿತ್ತು. ಹೀಗೆ ಪಾರ್ಶ್ವವಾಯುಪೀಡಿತರಾದ ಪ್ರತಿ 10 ಮಕ್ಕಳ ಪೈಕಿ 1 ಮಗುವು ಅಸುನೀಗಿತ್ತು.

ಶ್ರೀಮಂತ ದೇಶಗಳಲ್ಲಿ ಪೋಲಿಯೊ ತಡೆಗೆ ಅತ್ಯಂತ ದುಬಾರಿಯಾದ ಹಾಗೂ ಸುರಕ್ಷಿತವಾದ ಲಸಿಕೆಯನ್ನು ಬಳಸಲಾಗುತ್ತದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಿತವ್ಯಯದ ಕಾರಣದಿಂದ ಪೋಲಿಯೋ ನಿಯಂತ್ರಣಕ್ಕೆ ಬಾಯಿಯ ಮೂಲಕ ಲಸಿಕೆಯನ್ನು ನೀಡಲಾಗುತ್ತಿದೆ. ಆದರೆ ಭಾರತದಂತಹ 130 ಕೋಟಿಗೂ ಅಧಿಕ ಜನಸಂಖ್ಯೆಯಿರುವ ದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕೋರೊನ ಲಸಿಕೆಯ ಉತ್ಪಾದನೆ ಅಸಾಧ್ಯವಾದ ಕಾರಣ ವಿದೇಶದಿಂದ ಅವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. 2005ರಲ್ಲಿ ಪೊಲಿಯೋ ರೋಗದ ವಿರುದ್ಧ ಅಧಿಕ ಸಾಮರ್ಥ್ಯದ ಲಸಿಕೆಯನ್ನು ಭಾರತದಲ್ಲಿ ಪರಿಚಯಿಸಲಾಯಿತು. ಇದೊಂದು ಟೈಪ್ 1 ಪೋಲಿಯೊ ವೈರಸ್‌ಗಳ ವಿರುದ್ಧ ನೀಡಲಾಗುತ್ತಿದ್ದ ಮೊನೊವ್ಯಾಲೆಂಟ್ ಲಸಿಕೆಗಿಂತ 5 ಪಟ್ಟು ಹೆಚ್ಚು ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಈ ಹೊಸ ಲಸಿಕೆಯಿಂದಾಗಿ ಟೈಪ್ 1 ಪೋಲಿಯೊ ಪ್ರಕರಣಗಳ ಸಂಖ್ಯೆ ಹೆಚ್ಚು ತ್ವರಿತವಾಗಿ ಹರಡತೊಡಗಿತು. ಈ ಹೆಚ್ಚುವರಿ ಪ್ರಕರಣಗಳ ಸಂಖ್ಯೆಯು ನಿರೀಕ್ಷೆಗಿಂತ ಐದರಿಂದ ಆರು ಪಟ್ಟು ಅಧಿಕವಾಗಿತ್ತು. ಒಂದೇ ವರ್ಷದಲ್ಲಿ ಪೋಲಿಯೊ ಪ್ರಕರಣಗಳ ಸಂಖ್ಯೆಯು ವಾಡಿಕೆಗಿಂತ 4,000-5,000ದಷ್ಟು ಅಧಿಕವಾಗಿತ್ತು.ಉತ್ತರಪ್ರದೇಶದಲ್ಲಿ 2005ರಲ್ಲಿ ನೂತನ ಪಲ್ಸ್ ಪೋಲಿಯೊ ಲಸಿಕೆಯಿಂದಾಗಿ 60 ದಿನಗಳಲ್ಲಿ ಪೋಲಿಯೊ ಪ್ರಕರಣಗಳ ಸಂಖ್ಯೆಯು ವಾಡಿಕೆಗಿಂತ ಐದನೆ ಒಂದರಷ್ಟು ಅಧಿಕವಾಗಿತ್ತು. ಅವರಲ್ಲಿ ಶೇ.8.5 ಮಂದಿ ಸಾವನ್ನಪ್ಪಿದ್ದರು ಹಾಗೂ ಶೇ. 35 ಮಂದಿ ಪಾರ್ಶ್ವವಾಯುವಿಗೆ ತುತ್ತಾದರು. ಇದೀಗ ಕೋವಿಡ್-19 ಲಸಿಕೆಗಾಗಿ ವ್ಯಾಪಕ ಸಂಶೋಧನೆಗಳು ನಡೆಯುತ್ತಿವೆ. ಬಹುಶಃ ಮಾನವಕುಲದ ಇತಿಹಾಸದಲ್ಲೇ ಅತ್ಯಂತ ಕ್ಷಿಪ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಲಸಿಕೆ ಇದಾಗಿದೆ. ಒಂದು ವರ್ಷದೊಳಗೆ ಕೋವಿಡ್-19 ಲಸಿಕೆ ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ. ಸಾಮಾನ್ಯವಾಗಿ ಯಾವುದೇ ಒಂದು ಸೋಂಕು ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸಲು ಸರಾಸರಿ ಹತ್ತು ವರ್ಷ ತಗಲುತ್ತದೆ. ಈವರೆಗೆ ಅತ್ಯಂತ ತ್ವರಿತವಾಗಿ ಸಂಶೋಧಿಸಲಾದ ಲಸಿಕೆಯೆಂದರೆ ಮಂಗಬಾವು ಕಾಯಿಲೆಯದ್ದಾಗಿದ್ದು, ಅದಕ್ಕೆ ನಾಲ್ಕು ವರ್ಷಗಳು ತಗಲಿತ್ತು. ಇದೀಗ ಕೊರೋನ ವೈರಸ್ ಸೋಂಕಿಗೆ ಲಸಿಕೆ ಒಮ್ಮೆ ಲಭ್ಯವಾದಲ್ಲಿ, ಪ್ರಭಾವಿ ಔಷಧಿ ಲಾಬಿಗಳು ಅದನ್ನು ಜಾಗತಿಕ ಮಾರುಕಟ್ಟೆಗೆ ಬೃಹತ್ ಪ್ರಮಾಣದಲ್ಲಿ ಕ್ಷಿಪ್ರವಾಗಿ ಬಿಡುಗಡೆಗೊಳಿಸಲು ಮುಂದಾಗುತ್ತವೆ. ಆದರೆ ಯಾವುದೇ ಲಸಿಕೆಯ ಪರಿಣಾಮಗಳನ್ನು ಹಾಗೂ ಅವುಗಳ ಅಡ್ಡಪರಿಣಾಮಗಳನ್ನು ಕಂಡುಹಿಡಿಯಲು ಏನಿಲ್ಲವೆಂದರೂ ಕನಿಷ್ಠ ಒಂದೆರಡು ವರ್ಷಗಳೇ ಬೇಕಾಗುತ್ತವೆ.

ಭಾರತದಲ್ಲಿ ಕೊರೋನ ಲಸಿಕೆ ರಾಜಕೀಯವಾಗಿ ರೂಪಾಂತರಗೊಂಡಿದೆ. ಬಿಹಾರ ಚುನಾವಣೆಯಲ್ಲಿ ಆ ರಾಜ್ಯಕ್ಕೆ ಮಾತ್ರ ಉಚಿತ ಲಸಿಕೆ ನೀಡುವ ಮೂರ್ಖ ಭರವಸೆಯೊಂದನ್ನು ದೇಶವನ್ನು ಆಳುತ್ತಿರುವ ಪಕ್ಷವೊಂದು ನೀಡಿತು. ಈ ಕಾರಣದಿಂದಲೇ ಕೊರೋನ ಲಸಿಕೆಯ ನೇರ ಬಲಿಪಶುಗಳು ಅಥವಾ ಗಿನಿಪಿಗ್‌ಗಳು ಭಾರತದ ಜನರೇ ಆಗಲಿದ್ದಾರೆ. ಕೋವಿಡ್-19ಕ್ಕೆ ಸೂಕ್ತವಾದ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಮುನ್ನ ಅವುಗಳ ಸುರಕ್ಷತೆಯ ಬಗ್ಗೆ ಅತ್ಯಧಿಕ ಗಮನವನ್ನು ಸಂಬಂಧಪಟ್ಟ ಇಲಾಖೆಗಳು ನೀಡಬೇಕಾಗಿದೆ ಹಾಗೂ ಸಾರ್ವಜನಿಕರ ಆರೋಗ್ಯ ಸುರಕ್ಷತೆಯ ಬಗ್ಗೆ ಕಳಕಳಿಯುಳ್ಳ ವಿಜ್ಞಾನಿಗಳ ನಿಕಟವಾದ ಪರಿಶೀಲನೆಗೆ ಅವು ಒಳಗಾಗಬೇಕಾಗಿದೆ. ಬರೀ ಹಣಸಂಪಾದಿಸುವ ಉದ್ದೇಶದಿಂದ ಅಥವಾ ರಾಜಕೀಯ ಕಾರಣಕ್ಕಾಗಿ ತರಾತುರಿಯಲ್ಲಿ ಕೊರೋನ ವೈರಸ್ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದರಿಂದ ಇನ್ನಷ್ಟು ಗಂಭೀರ ಅಪಾಯಗಳಿಗೆ ಕಾರಣವಾಗಬಹುದು. ಹಾಗಾದಲ್ಲಿ ಭಾರತ ಸೇರಿದಂತೆ ಇಡೀ ಜಗತ್ತು ಇನ್ನೊಂದು ದೊಡ್ಡ ದುರಂತವನ್ನು ಎದುರಿಸಬೇಕಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News