×
Ad

ಸ್ವಂತ ಕಾರೂ ಇಲ್ಲದ ಟರ್ಕಿಶ್ ದಂಪತಿ ಈಗ ಕೊರೋನ ಲಸಿಕೆಯಿಂದ ಬಿಲಿಯಾಧೀಶರು…

Update: 2020-11-14 21:00 IST
 ಫೋಟೊ ಕೃಪೆ: twitter.com

ಬರ್ಲಿನ್ (ಜರ್ಮನಿ), ನ.14: ಈ ವಾರದ ಆದಿ ಭಾಗದಲ್ಲಿ ಜಗತ್ತಿನಾದ್ಯಂತ ಸಂಚಲನ ಮೂಡಿಸಿರುವ ಫೈಝರ್ ಕೊರೋನ ವೈರಸ್ ಲಸಿಕೆಯ ಯಶಸ್ಸಿನ ಹಿಂದೆ ಟರ್ಕಿ ಮೂಲದ ಜರ್ಮನ್ ದಂಪತಿಯ ಅಪಾರ ಶ್ರಮವಿದೆ.

ಅಮೆರಿಕದ ಫೈಝರ್ ಮತ್ತು ಜರ್ಮನಿಯ ಬಯೋಎನ್‌ಟೆಕ್ ಕಂಪೆನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಆರ್‌ಎನ್‌ಎ ತಂತ್ರಜ್ಞಾನ ಆಧಾರಿತ ಕೊರೋನ ವೈರಸ್ ಲಸಿಕೆಯು, 90 ಶೇಕಡಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನುವುದು ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ಸೋಮವಾರ ಫೈಝರ್ ಕಂಪೆನಿಯು ಘೋಷಿಸಿದೆ.
ಈ ಸುದ್ದಿ ಘೋಷಣೆಯಾಗುವವರೆಗೆ ಓಡಾಡಲು ಕಾರೂ ಇಲ್ಲದಿದ್ದ ಜರ್ಮನ್ ದಂಪತಿ ಉಗುರ್ ಸಾಹಿನ್ ಮತ್ತು ಓಝ್ಲೆಮ್ ತೌರೇಸಿ ಈಗ ಬಿಲಿಯಾಧೀಶ ದಂಪತಿಯಾಗಿದ್ದಾರೆ. ಅವರು ಈಗ ಜರ್ಮನಿಯ 100 ಅತಿ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ ಎಂದು ಜರ್ಮನಿಯ ಪತ್ರಿಕೆ ‘ವೆಲ್ಟ್ ಅಮ್ ಸೊನ್‌ಟಾಗ್’ ವರದಿ ಮಾಡಿದೆ.
ಅವರು ಸ್ಥಾಪಿಸಿರುವ ಕಂಪೆನಿ ಬಯೋಎನ್‌ಟೆಕ್‌ನ ಶೇರುಗಳ ಮೌಲ್ಯ ದಿನೇ ದಿನೇ ಏರುತ್ತಿದೆ.

ಸ್ವಂತ ಸಂಶೋಧನಾ ಸಂಸ್ಥೆ ಸ್ಥಾಪನೆ

ಸಾಹಿನ್ ಮತ್ತು ತೌರೇಸಿ ಇಬ್ಬರೂ ಜರ್ಮನಿಗೆ ವಲಸೆ ಬಂದ ಟರ್ಕಿ ವಲಸಿಗರ ಮಕ್ಕಳು. ಜರ್ಮನಿಯ ಹೊಮ್‌ಬರ್ಗ್ ನಗರದಲ್ಲಿ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾಗ ಅವರು ಪರಸ್ಪರರನ್ನು ಭೇಟಿಯಾದರು. ವೈದ್ಯಕೀಯ ತಂತ್ರಜ್ಞಾನ ಅಗಾಧವಾಗಿ ಮುಂದುವರಿದರೂ, ಅದು ವೈದ್ಯರು ಮತ್ತು ರೋಗಿಗಳಿಗೆ ತಲುಪುತ್ತಿಲ್ಲ ಎನ್ನುವುದನ್ನು ದಂಪತಿ ಕಂಡುಕೊಂಡರು. ಈ ಅಂತರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸುವುದಕ್ಕಾಗಿ ಅವರು 2008ರಲ್ಲಿ ತಮ್ಮದೇ ಕಂಪೆನಿ ಬಯೋಎನ್‌ಟೆಕ್ ಸ್ಥಾಪಿಸಿದರು. 

ಆರ್‌ಎನ್‌ಎ ತಂತ್ರಜ್ಞಾನ ಆಧಾರಿತ ಲಸಿಕೆ: ಬಯೋಎನ್‌ಟೆಕ್ ಸ್ಥಾಪನೆಯ ಬಳಿಕ, ಸಾಹಿನ್ ಮತ್ತು ಟುರೆಸಿ ಆರ್‌ಎನ್‌ಎ ತಂತ್ರಜ್ಞಾನ ಆಧಾರಿತ ಕ್ಯಾನ್ಸರ್ ಲಸಿಕೆಯೊಂದರ ಸಂಶೋಧನೆಗೆ ತೊಡಗಿದರು. ಸಾಂಪ್ರದಾಯಿಕ ಲಸಿಕೆಯು ವೈರಸ್ ಪ್ರೊಟೀನ್‌ಗಳನ್ನು ಆಧರಿಸಿರುತ್ತದೆ. ಆದರೆ, ಎಮ್‌ಆರ್‌ಎನ್‌ಎ ಲಸಿಕೆಗಳಲ್ಲಿ ವಂಶವಾಹಿ ಕೋಡ್ (ಕಾರ್ಯಕ್ರಮ) ಒಂದನ್ನು ಅಳವಡಿಸಲಾಗುತ್ತದೆ ಹಾಗೂ ಪ್ರೊಟೀನ್‌ಗಳನ್ನು ಸ್ವತಃ ತಯಾರಿಸುವಂತೆ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಗೆ ಈ ಕೋಡ್ ಸೂಚನೆ ನೀಡುತ್ತದೆ.

ಕೊರೋನ ಲಸಿಕೆಗಾಗಿ ಫೈಝರ್‌ನೊಂದಿಗೆ ಸಹಯೋಗ: ಈ ವರ್ಷದ ಜನವರಿಯಲ್ಲಿ ಕೊರೋನ ವೈರಸ್ ಜಾಗತಿಕ ಮಟ್ಟದಲ್ಲಿ ಸುದ್ದಿಯಾದಾಗ ಅವರು ಕೊರೋನ ಲಸಿಕೆಯ ಸಂಶೋಧನೆಯಲ್ಲಿ ತೊಡಗಿದರು. ಮೇಂಝ್ ನಗರದಲ್ಲಿರುವ ಬಯೋಎನ್‌ಟೆಕ್ ಪ್ರಯೋಗಾಲಯದಲ್ಲಿ 1,000ಕ್ಕೂ ಅಧಿಕ ಸಂಶೋಧಕರು ದಿನದ 24 ಗಂಟೆಯೂ ಲಸಿಕೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದರು.

ಆದರೆ, ಬೃಹತ್ ಪ್ರಮಾಣದ ಕ್ಲಿನಿಕಲ್ ಪ್ರಯೋಗಗಳಿಗೆ ಹಾಗೂ ಆ ಬಳಿಕದ ಲಸಿಕೆ ಉತ್ಪಾದನೆ ಮತ್ತು ವಿತರಣೆಗಳಿಗೆ ಅವರ ಬಳಿ ಸಂಪನ್ಮೂಲವಿರಲಿಲ್ಲ. ಎಪ್ರಿಲ್‌ನಲ್ಲಿ ಬಯೋಎನ್‌ಟೆಕ್ ಅಮೆರಿಕದ ಫೈಝರ್ ಕಂಪೆನಿಯನ್ನು ಸಂಪರ್ಕಿಸಿತು. ಫೈಝರ್ ಆರಂಭದಲ್ಲಿ ಲಸಿಕೆ ಅಭಿವೃದ್ಧಿಗಾಗಿ 185 ಮಿಲಿಯ ಡಾಲರ್ (ಸುಮಾರು 1,380 ಕೋಟಿ ರೂಪಾಯಿ) ಹೂಡಿಕೆ ಮಾಡಿತು. ಹಾಗೂ ಅಭಿವೃದ್ಧಿಯನ್ನು ಗಮನಿಸಿ ಮುಂದಕ್ಕೆ 563 ಮಿಲಿಯ ಡಾಲರ್ (ಸುಮಾರು 4,200 ಕೋಟಿ ರೂಪಾಯಿ) ಹೂಡಿಕೆ ಮಾಡುವುದಾಗಿ ಘೋಷಿಸಿತು.

ಮದುವೆಗಾಗಿ ಅರ್ಧದಿನ ರಜೆ!

ಸಾಹಿನ್ ಮತ್ತು ತೌರೇಸಿ 2002ರಲ್ಲಿ ಮದುವೆಯಾದರು. ಮದುವೆಯ ದಿನದಂದು ಅವರು ಬೆಳಗ್ಗೆ ರಜೆ ಮಾಡಿದರು. ಮದುವೆ ಮುಗಿದ ನಂತರ ಮಧ್ಯಾಹ್ನ ಅವರು ಪ್ರಯೋಗಾಲಯಕ್ಕೆ ಮರಳಿ ಕೆಲಸದಲ್ಲಿ ತೊಡಗಿದರು.
‘‘ಮದುವೆಗೆ ಅರ್ಧ ದಿನ ಸಾಕು’’ ಎಂದು ತೌರೇಸಿ ಹೇಳುತ್ತಾರೆ.

ಸೈಕಲ್‌ನಲ್ಲೇ ಓಡಾಟ: ಕಾರು ಹೊಂದಿರದಿದ್ದ ಸಂಶೋಧಕ ದಂಪತಿ ಸೈಕಲ್‌ನಲ್ಲೇ ಮನೆಯಿಂದ ಪ್ರಯೋಗಾಲಯಕ್ಕೆ ಹಾಗೂ ಪ್ರಯೋಗಾಲಯದಿಂದ ವಾಪಸ್ ಮನೆಗೆ ಓಡಾಡುತ್ತಿದ್ದರು.

‘‘ನನ್ನಲ್ಲಿ ಕಾರಿಲ್ಲ. ಇನ್ನು ನಾನು ವಿಮಾನವನ್ನೂ ಖರೀದಿಸುವುದಿಲ್ಲ’’ ಎಂದು ಸಾಹಿನ್ ಹೇಳಿದರು.
‘‘ವೈದ್ಯಕೀಯ ಕ್ಷೇತ್ರದಲ್ಲಿ ಏನಾದರೂ ಪರಿಣಾಮ ಬೀರಲು ಸಾಧ್ಯವಾದರೆ ಅದೇ ನನ್ನ ಬದುಕು ಬದಲಿಸುವ ಸಾಧನೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News