ಫಿಲಿಪ್ಪೀನ್ಸ್: ವ್ಯಾಮ್ಕಾ ಚಂಡಮಾರುತಕ್ಕೆ 67 ಬಲಿ

Update: 2020-11-15 16:54 GMT

ಮನಿಲಾ,ನ.15: ಫಿಲಿಪ್ಪೀನ್ಸ್ ನ ಕರಾವಳಿಗೆ ಅಪ್ಪಳಿಸಿದ ಅತ್ಯಂತ ಭೀಕರವಾದ ವ್ಯಾಮ್ಕಾ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 67ಕ್ಕೇರಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ರವಿವಾರ ತಿಳಿಸಿದೆ.

  ಚಂಡಮಾರುತದಿಂದ ತೀವ್ರವಾಗಿ ಬಾಧಿತವಾಗಿರುವ ಕ್ಯಾಗಾಯಾನ್ ಕಣಿವೆ ಪ್ರಾಂತದಲ್ಲಿನ ಪರಿಸ್ಥಿತಿಯನ್ನು ಅಂದಾಜಿಸಲು ಅಧ್ಯಕ್ಷ ರೊಡ್ರಿಗೊ ಡ್ಯುಟೆರ್ಟೆ ಅವರು ಕ್ಯಾಗಯಾನ್ ಕಣಿವೆ ಪ್ರಾಂತಕ್ಕೆ ಭೇಟಿ ನೀಡಿದ್ದಾರೆ. ವ್ಯಾಮ್ಕಾ ಚಂಡಮಾರುತವು ಅಪ್ಪಳಿಸಿದ ಬಳಿಕ ಸುರಿದ ಕುಂಭದ್ರೋಣ ಮಳೆಯಿಂದಾಗಿ ರಾಜಧಾನಿ ಮನಿಲಾ ಸೇರಿದಂತೆ ಮುಖ್ಯ ಲುಝಾನ್ ದ್ವೀಪದ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ.

ಚಂಡಮಾರುತದಿಂದಾಗಿ ಕ್ಯಾಗಾಯಾನ್ ಕಣಿವೆಯಲ್ಲಿ ಸಂಭವಿಸಿದ ವಿವಿಧ ದುರಂತಗಳಿಂದಾಗಿ ಮೃತಪಟ್ಟವರ ಸಂಖ್ಯೆ 22ಕ್ಕೇರಿದೆ. ದಕ್ಷಿಣ ಲ್ಯುಝಾನ್ ಪ್ರಾಂತಗಳಲ್ಲಿ 17 ಮಂದಿ, ಮೆಟ್ರೋ ಮನಿಲಾದಲ್ಲಿ 8 ಮಂದಿ ಹಾಗೂ ಇತರ ಎರಡು ಪ್ರಾಂತಗಳಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆಂದು ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಮಾರ್ಕ್ ಟಿಂಬಾಲ್ ತಿಳಿಸಿದ್ದಾರೆ.

 ಫಿಲಿಪ್ಪೀನ್ಸ್‌ನಲ್ಲಿ ಭತ್ತ ಹಾಗೂ ಗೋಧಿ ಉತ್ಪಾದಿಸುವ, 12 ಲಕ್ಷಜನಸಂಖ್ಯೆಯ ಕ್ಯಾಗಾಯಾನ್ ಪ್ರಾಂತದ ಅನೇಕ ಪ್ರದೇಶಗಳು ರವಿವಾರವೂ ನೀರಿನಲ್ಲಿ ಮುಳುಗಡೆಗೊಂಡಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

 ವ್ಯಾಮ್ಕಾ ಚಂಡಮಾರುತದಿಂದಾಗಿ ಉಂಟಾದ ಪ್ರವಾಹದಿಂದಾಗಿ 26 ಸಾವಿರಕ್ಕೂ ಅಧಿಕ ಮನೆಗಳು ಹಾನಿಗೀಡಾಗಿದ್ದು, ಸುಮಾರು 186.34 ಕೋಟಿ ರೂ. ವೌಲ್ಯದ ನಷ್ಟವುಂಟಾಗಿದೆಯೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News