×
Ad

ಇಸ್ರೇಲ್‌ನಿಂದ ಹಮಸ್ ನೆಲೆಗಳ ಮೇಲೆ ವಾಯುದಾಳಿ

Update: 2020-11-15 22:41 IST

ಜೆರುಸಲೇಂ,ನ.15: ಫೆಲೆಸ್ತೀನ್ ಪ್ರಾಂತದಿಂದ ಎರಡು ರಾಕೆಟ್‌ಗಳು ಇಸ್ರೇಲ್ ಪ್ರದೇಶಗಳಿಗೆ ಅಪ್ಪಳಿಸಿದ ಬೆನ್ನಲ್ಲೇ ಇಸ್ರೇಲಿ ಸೇನೆಯು ಗಾಝಾಪಟ್ಟಿ ಪ್ರದೇಶದಲ್ಲಿರುವ ಹಮಾಸ್ ನೆಲೆಗಳನ್ನು ಗುರಿಯಿರಿಸಿ ವಾಯುದಾಳಿ ನಡೆಸಿದೆ.

 ಇಸ್ರೇಲಿ ಫೈಟರ್ ಜೆಟ್‌ಗಳು, ಆ್ಯಟಾಕ್ ಹೆಲಿಕಾಪ್ಟರ್‌ಗಳು ಹಾಗೂ ಟ್ಯಾಂಕ್‌ಗಳು, ಹಮಾಸ್‌ನ ಭೂಗತ ಮೂಲಸೌಕರ್ಯಗಳು ಹಾಗೂ ಸೇನಾ ಠಾಣೆಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಹಮಸ್ ಹೋರಾಟಗಾರರು ಇಸ್ರೇಲ್ ಮೇಲೆ ಎರಡು ರಾಕೆಟ್‌ಗಳನ್ನು ಎಸೆದಿದ್ದು, ಅವುಗಳಲ್ಲಿ ಒಂದು ದಕ್ಷಿಣ ಇಸ್ರೇಲ್‌ನ ಆ್ಯಶ್‌ಡೊಡ್ ಪಟ್ಟಣದ ಮೇಲೆ ಅಪ್ಪಳಿಸಿತ್ತು ಹಾಗೂ ಇನ್ನೊಂದು ಕ್ಷಿಪಣಿಯು ಮಧ್ಯ ಇಸ್ರೇಲ್ ಮೇಲೆ ಬಿದ್ದಿತ್ತು. ಆದರೆ ಈ ದಾಳಿಗಳಿಂದ ಎರಡೂ ಕಡೆಗಳಲ್ಲಿಯೂ ಉಂಟಾಗಿರುವ ಸಾವುನೋವುಗಳ ಬಗ್ಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ.

2007ರಿಂದೀಚೆಗೆ ಇಸ್ರೇಲ್ ಹಾಗೂ ಹಮಾಸ್ ನಡುವೆ ಮೂರು ಯುದ್ಧಗಳು ನಡೆದಿವೆ ಹಾಗೂ ಹಲವಾರು ಬಾರಿ ಸಣ್ಣ ಪುಟ್ಟ ಸಂಘರ್ಷಗಳು ನಡೆಯುತ್ತಲೇ ಇವೆ. ಗಾಝಾದಿಂದ ಹಲವಾರು ಫೆಲೆಸ್ತೀನ್ ಹೋರಾಟಗಾರ ಸಂಘಟನೆಗಳು ಕಾರ್ಯಾಚರಿಸುತ್ತಿವೆ. ಆದರೆ ಎಲ್ಲಾ ದಾಳಿಗಳಿಗೂ ಇಸ್ರೇಲ್, ಹಮಾಸ್ ಸಂಘಟನೆಯನ್ನೇ ಹೊಣೆಗಾರನನ್ನಾಗಿ ಮಾಡುತ್ತಿದೆ ಮತ್ತು ಪ್ರತೀಕಾರವಾಗಿ ಗಾಝಾದಲ್ಲಿರುವ ಹಮಾಸ್ ನೆಲೆಗಳ ಮೇಲೆ ವಾಯುದಾಳಿ ಮತ್ತು ರಾಕೆಟ್ ದಾಳಿಗಳ ಪ್ರತ್ಯಾಕ್ರಮಣ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News