ಇಲ್ಲಿ ಕೆಲವರಿಗೆ ಮಾತ್ರ ವ್ಯಕ್ತಿ ಸ್ವಾತಂತ್ರ್ಯ

Update: 2020-11-15 19:30 GMT

ಸುಪ್ರೀಂಕೋರ್ಟ್ ಕಾನೂನಿನ ದೃಷ್ಟಿಯಿಂದ ಅರ್ನಬ್‌ಗೆ ಜಾಮೀನು ನೀಡಿರುವುದು ತಪ್ಪಲ್ಲದಿರಬಹುದು. ಜಾಮೀನು ನೀಡುವಾಗ ನ್ಯಾಯಾಧೀಶರು ‘ವ್ಯಕ್ತಿ ಸ್ವಾತಂತ್ರ್ಯ’ದ ಮಾತುಗಳನ್ನು ಆಡಿದರು.ಅರ್ನಬ್ ಬಂಧನದ ಪ್ರಶ್ನೆ ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಾಗುವುದಾದರೆ, ಮಹಾರಾಷ್ಟ್ರ ಮತ್ತಿತರ ಕಡೆ ವರ್ಷಗಳ ಕಾಲ ಬಂಧಿಸಿಡಲಾದ ಜನಪರ ಹೋರಾಟಗಾರರ ಪ್ರಶ್ನೆ ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಏಕಲ್ಲ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.


ಯಾವುದೇ ಆಡಳಿತ ವ್ಯವಸ್ಥೆ ಇರಲಿ ಪ್ರಜೆಗಳಿಗೆ ನ್ಯಾಯ ನೀಡಿಕೆಯಲ್ಲಿ ಅನ್ಯಾಯವಾಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಂತೂ ಅನ್ಯಾಯವಾಗಲೇಬಾರದು. ಆದರೆ ವಿಷಾದದ ಸಂಗತಿಯೆಂದರೆ ನ್ಯಾಯಾಂಗದ ಬಗ್ಗೆ ಅಪನಂಬಿಕೆ ಉಂಟಾಗುವಂತಹ ವಿದ್ಯಮಾನಗಳನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ನ್ಯಾಯಾಲಯದ ತೀರ್ಪನ್ನು ಅಗೌರವಿಸಬಾರದೆಂಬುದನ್ನು ಒಪ್ಪಿಕೊಳ್ಳುತ್ತಲೇ ನಮ್ಮ ಸಂದೇಹಗಳಿಗೆ ಸಮಾಧಾನಕರ ಉತ್ತರ ನಿರೀಕ್ಷಿಸಿದರೆ ತಪ್ಪಲ್ಲ.

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ನಮ್ಮ ಪ್ರಜಾಪ್ರಭುತ್ವದ ಮೂರು ಆಧಾರ ಸ್ತಂಭಗಳು. ಪತ್ರಿಕಾರಂಗವನ್ನೂ ಆಧಾರ ಸ್ತಂಭವೆಂದು ಕರೆಯಲಾಗಿದೆಯಾದರೂ ಸಂವಿಧಾನದಲ್ಲಿ ಅದರ ಉಲ್ಲೇಖವಿಲ್ಲ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಕಾರ್ಯನಿರ್ವಹಣೆ ಸಂವಿಧಾನಾತ್ಮಕ ವಾಗಿರಬೇಕಾಗುತ್ತದೆ. ಈ ಮೂರು ಆಧಾರ ಸ್ತಂಭಗಳಲ್ಲಿ ನ್ಯಾಯಾಂಗಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.ಶಾಸಕಾಂಗ ರಚಿಸುವ ಶಾಸನಗಳು ಮತ್ತು ಕಾರ್ಯಾಂಗ ಹೊರಡಿಸುವ ಆದೇಶಗಳಂತೆ ನ್ಯಾಯಾಂಗ ನೀಡುವ ತೀರ್ಪುಗಳು ಸಂವಿಧಾನಾತ್ಮಕವಾಗಿರಬೇಕಾಗುತ್ತದೆ.ಆದರೆ ವಿಷಾದದ ಸಂಗತಿಯೆಂದರೆ ನ್ಯಾಯಾಲಯದ ತೀರ್ಪುಗಳ ಬಗ್ಗೆ ಜನರು ಈಗ ದಾರಿಯಲ್ಲಿ ಮಾತಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಕ್ರಿಮಿನಲ್ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿ ಒಂದೇ ವಾರದಲ್ಲಿ ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದು ಹೊರಗೆ ಬಂದರು. ಅವರು ಜಾಮೀನು ಪಡೆದು ಹೊರಗೆ ಬರಬಾರದೆಂದಲ್ಲ. ಆದರೆ ಈ ನ್ಯಾಯ ಎಲ್ಲರಿಗೂ ಸಮಾನವಾಗಿರಬೇಕಲ್ಲವೆ? ಬಂಧನಕ್ಕೊಳಗಾದ ತಕ್ಷಣ ಅರ್ನಬ್ ಜಾಮೀನು ಅರ್ಜಿಯನ್ನು ಹಾಕಿದ್ದರು. ಆದರೆ ಮುಂಬೈ ಹೈಕೋರ್ಟ್ ಅರ್ನಬ್‌ರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಸೆಷನ್ಸ್ ಕೋರ್ಟಿಗೆ ಹೋಗಲು ಹೇಳಿತು. ಆಗ ಅರ್ನಬ್‌ರ ವಕೀಲರಾದ ಹರೀಶ್ ಸಾಳ್ವೆ ಅವರು ಸೆಷನ್ಸ್ ಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎರಡರಲ್ಲೂ ಜಾಮೀನು ಅರ್ಜಿ ಸಲ್ಲಿಸಿದರು. ಸಾಳ್ವೆ ಅತ್ಯಂತ ಪ್ರಭಾವೀ ವಕೀಲರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಾಮಾನ್ಯವಾಗಿ ಜಾಮೀನು ಅರ್ಜಿಗಳನ್ನು ಯಾವುದೇ ನ್ಯಾಯಾಲಯವಿರಲಿ ಸುಪ್ರೀಂಕೋರ್ಟ್ ಆಗಿರಲಿ ತಕ್ಷಣಕ್ಕೆ ಕೈಗೆತ್ತಿಕೊಳ್ಳುವುದಿಲ್ಲ. ಆದ್ಯತೆಯ ಮೇಲೆ ವಿಚಾರಣೆಗೆ ಮುಂದಾಗುತ್ತವೆ. ಆದರೆ ಅರ್ನಬ್ ವಿಷಯದಲ್ಲಿ ಹಾಗಾಗಲಿಲ್ಲ. ತಕ್ಷಣ ಜಾಮೀನು ಅರ್ಜಿಯನ್ನು ಆಲಿಸಲು ಸುಪ್ರೀಂಕೋರ್ಟ್ ನ್ಯಾಯಪೀಠ ಮುಂದಾಯಿತು. ಸುಪ್ರೀಂಕೋರ್ಟಿನ ಈ ತೀರ್ಮಾನದ ಬಗ್ಗೆ ಜನರು ಸಹಜವಾಗಿ ಆಡಿಕೊಳ್ಳತೊಡಗಿದರು. ಆದರೆ ಅದಕ್ಕಿಂತ ಮುಖ್ಯವಾಗಿ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ದುಷ್ಯಂತ್ ದವೆ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ದೇಶದಲ್ಲಿ ಅನೇಕ ಜಾಮೀನು ಅರ್ಜಿಗಳು ಇನ್ನೂ ಇತ್ಯರ್ಥವಾಗದೆ ಇರುವಾಗ ಅರ್ನಬ್ ಜಾಮೀನು ಅರ್ಜಿಗೆ ವಿಶೇಷ ಆದ್ಯತೆ ನೀಡಿದ್ದು ಏಕೆ ಎಂದು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಗೆ ಅವರು ಪತ್ರ ಬರೆದರು. ಸಾಮಾನ್ಯವಾಗಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೌಖಿಕ ಇಲ್ಲವೇ ಲಿಖಿತ ಸೂಚನೆಗಳಿಲ್ಲದೆ ಈ ರೀತಿ ತುರ್ತಾಗಿ ಜಾಮೀನು ಅರ್ಜಿಯನ್ನು ಸಾಮಾನ್ಯವಾಗಿ ಕೈಗೆತ್ತಿಕೊಳ್ಳುವುದಿಲ್ಲ ಎಂಬುದು ದುಷ್ಯಂತ್ ದವೆಯವರ ಆಕ್ಷೇಪದ ಸಾರಾಂಶವಾಗಿದೆ.

 ಎಂಬತ್ತರ ವಯೋವೃದ್ಧ ಕವಿ ವರವರರಾವ್, ಹೆಸರಾಂತ ನ್ಯಾಯವಾದಿ ಸುಧಾ ಭಾರದ್ವಾಜ್, ಖ್ಯಾತ ಚಿಂತಕ ಆನಂದ್ ತೇಲ್ತುಂಬ್ಡೆ ಅವರೂ ಸೇರಿದಂತೆ ಸುಮಾರು ಇಪ್ಪತ್ತೈದು ಮಂದಿ ಸಾಮಾಜಿಕ ಕಾರ್ಯಕರ್ತರನ್ನು, ಲೇಖಕರನ್ನು ಖಚಿತ ಪುರಾವೆಗಳಿಲ್ಲದೆ, ಸುಳ್ಳು ಆರೋಪಗಳ ಮೇಲೆ ಬಂಧಿಸಿ ಎರಡು ವರ್ಷ ದಾಟಿದರೂ ಅವರಿಗೆ ಈವರೆಗೆ ಜಾಮೀನು ಸಿಕ್ಕಿಲ್ಲ. ಈ ಪೈಕಿ ವರವರರಾವ್ ಮತ್ತು ಸುಧಾ ಭಾರದ್ವಾಜ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಪರಿ ಪರಿಯಾಗಿ ಕೇಳಿಕೊಂಡರೂ ಜಾಮೀನು ಮಂಜೂರಾಗಲಿಲ್ಲ. ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅನೇಕ ತಿಂಗಳ ಕಾಲ ಜೈಲಿನಲ್ಲಿ ಕಳೆದರು. ಅವರಿಗೂ ಸಕಾಲದಲ್ಲಿ ಜಾಮೀನು ಸಿಗಲಿಲ್ಲ. ದೇಶದ ವಿವಿಧ ಜೈಲುಗಳಲ್ಲಿರುವ ಸುಮಾರು ಇಪ್ಪತ್ತು ಮಂದಿ ಪತ್ರಕರ್ತರು ಜಾಮೀನಿನ ಮೇಲೆ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅವರಿಗೂ ಜಾಮೀನು ಸಿಕ್ಕಿಲ್ಲ. ಹಾಗಿದ್ದರೆ ಅರ್ನಬ್‌ಗೆ ಈ ವಿಶೇಷ ರಿಯಾಯಿತಿ ಏಕೆ ಎಂಬ ಪ್ರಶ್ನೆ ಉದ್ಭವವಾದರೆ ತಪ್ಪಲ್ಲ.

ಸುಪ್ರೀಂಕೋರ್ಟ್ ಕಾನೂನಿನ ದೃಷ್ಟಿಯಿಂದ ಅರ್ನಬ್‌ಗೆ ಜಾಮೀನು ನೀಡಿರುವುದು ತಪ್ಪಲ್ಲದಿರಬಹುದು. ಜಾಮೀನು ನೀಡುವಾಗ ನ್ಯಾಯಾಧೀಶರು ‘ವ್ಯಕ್ತಿ ಸ್ವಾತಂತ್ರ್ಯ’ದ (personal Liberty) ಮಾತುಗಳನ್ನು ಆಡಿದರು.ಅರ್ನಬ್ ಬಂಧನದ ಪ್ರಶ್ನೆ ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಾಗುವುದಾದರೆ, ಮಹಾರಾಷ್ಟ್ರ ಮತ್ತಿತರ ಕಡೆ ವರ್ಷಗಳ ಕಾಲ ಬಂಧಿಸಿಡಲಾದ ಜನಪರ ಹೋರಾಟಗಾರರ ಪ್ರಶ್ನೆ ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಏಕಲ್ಲ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಹೆಸರಾಂತ ತೆಲುಗು ಕವಿ ವರವರರಾವ್ ಎಂಬತ್ತರ ವಯೋವೃದ್ಧರು. ಅವರ ಆರೋಗ್ಯ ಹದಗೆಟ್ಟಿದೆ.ಅವರ ಪತ್ನಿ ಪತಿಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಬೇಕೆಂದು ಕೋರಿ ಮುಂಬೈ ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯನ್ನು ಕಳೆದ ಗುರುವಾರ ಮತ್ತೆ ತಿರಸ್ಕರಿಸಲಾಗಿದೆ. ವರವರರಾವ್ ಹಾಸಿಗೆಯಿಂದ ಎದ್ದು ಓಡಾಡುವ ಸ್ಥಿತಿಯಲ್ಲೂ ಇಲ್ಲ. ಅಲ್ಲೇ ಮೂತ್ರ ಮಾಡಿಕೊಳ್ಳುತ್ತಾರೆ ಎಂದು ಅವರ ಮಡದಿ ಕೋರ್ಟಿನ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.

ಇನ್ನು ಕರ್ನಾಟಕ ಮೂಲದ ಆದರೆ ಅಮೆರಿಕದಲ್ಲಿ ನೆಲೆಸಿದ್ದ ಭಾರದ್ವಾಜ್ ಕುಟುಂಬಕ್ಕೆ ಸೇರಿದ ಸುಧಾ ಭಾರದ್ವಾಜ್ ಅವರು ಹೆಸರಾಂತ ನ್ಯಾಯವಾದಿ. ಲಕ್ಷಾಂತರ ರೂಪಾಯಿ ಪಡೆದು ಸಿರಿವಂತರ ಪರವಾಗಿ ವಕಾಲತ್ತು ಮಾಡುವುದನ್ನು ಬಿಟ್ಟು ಜಾರ್ಖಂಡ್‌ನ ಬಡ ಆದಿವಾಸಿಗಳ ಬದುಕುವ ಹಕ್ಕಿಗಾಗಿ ಹೋರಾಡಲು ತಮ್ಮ ಬದುಕನ್ನೇ ಅರ್ಪಿಸಿಕೊಂಡವರು. ಇವರ ಮೇಲೆ 2017ರಲ್ಲಿ ನಡೆದ ಪುಣೆಯ ಎಲ್ಗಾರ್‌ಪರಿಷತ್ತಿನ ಸಭೆಯಲ್ಲಿ ಪ್ರಚೋದಕ ಮಾತುಗಳನ್ನು ಆಡಿದ ಖಟ್ಲೆಯನ್ನು ಹಾಕಲಾಗಿದೆ. ಆದರೆ ಆ ಸಭೆ ನಡೆದ ದಿನ ಸುಧಾ ಭಾರದ್ವಾಜ್ ಅಲ್ಲಿರಲಿಲ್ಲ. ಆರೆಸ್ಸೆಸ್ ಕಾರ್ಯಕರ್ತ ತುಷಾರ್ ಎಂಬಾತ ಸಲ್ಲಿಸಿದ ದೂರಿನ ಆಧಾರದಲ್ಲಿ ಸುಧಾ ಅವರನ್ನು ಬಂಧಿಸಲಾಗಿದೆ. ಅದೂ ಮರಾಠಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆಯೆನ್ನಲಾದ ಸುಧಾ ಅವರ ಪತ್ರಿಕಾ ಹೇಳಿಕೆಯನ್ನು ಆಧರಿಸಿ ಈ ಖಟ್ಲೆ ಹಾಕಲಾಗಿದೆ. ಈ ಆರೋಪ ಸುಳ್ಳೆಂದು ಗೊತ್ತಾದಾಗ ಮಹಾರಾಷ್ಟ್ರ ಸರಕಾರ ಪ್ರಕರಣವನ್ನು ಕೈ ಬಿಡಲು ತೀರ್ಮಾನಿಸಿತು. ಆದರೆ ಕೇಂದ್ರ ಗೃಹ ಸಚಿವರ ಕುಮ್ಮಕ್ಕಿನಿಂದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇದನ್ನು ಕೈಗೆತ್ತಿಕೊಂಡು ಆರೋಪ ಪಟ್ಟಿ ಸಲ್ಲಿಸದೆ ಜೈಲಿನಲ್ಲಿ ಕೊಳೆ ಹಾಕಿದೆ ಎನ್ನಲಾಗಿದೆ. ಇಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಅನ್ವಯವಾಗುವುದಿಲ್ಲವೇ?

ಇನ್ನು ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಸಾಯಿಬಾಬಾ ಅವರ ಬಂಧನವಾಗಿ 2,386 ದಿನಗಳಾದವು. ದೈಹಿಕವಾಗಿ ನೂರಕ್ಕೆ 99ರಷ್ಟು ಅಂಗವಿಕಲರಾಗಿರುವ ಸಾಯಿಬಾಬಾ ಅವರನ್ನು ಕೂಡ ಮಾವೋವಾದಿಗಳನ್ನು ಬೆಂಬಲಿಸುತ್ತಿದ್ದರೆಂಬ ಆರೋಪದ ಮೇಲೆ ಬಂಧಿಸಲಾಗಿದೆ. ಅನಾರೋಗ್ಯ ಇದ್ದರೂ ಜಾಮೀನು ಸಿಗಲಿಲ್ಲ. ತಾಯಿ ಅಸ್ವಸ್ಥರಾಗಿದ್ದಾಗಲೂ ನೋಡಿಕೊಂಡು ಬರಲು ಜಾಮೀನು ಸಿಗಲಿಲ್ಲ. ಮರಣ ಹೊಂದಿದಾಗಲೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಾಮೀನು ಸಿಗಲಿಲ್ಲ. ತಾಯಿಯ ಅಂತಿಮ ಕರ್ಮಗಳಲ್ಲಿ ಪಾಲ್ಗೊಳ್ಳಲು ಜಾಮೀನು ಸಿಗಲಿಲ್ಲ. ಇದು ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಅಲ್ಲವೇ?

ಗೋವಾ ಐಐಟಿಯ ಪ್ರಾಧ್ಯಾಪಕ ಹಾಗೂ ಹೆಸರಾಂತ ಚಿಂತಕ, ಲೇಖಕ ಪ್ರೊ. ಆನಂದ್ ತೇಲ್ತುಂಬ್ಡೆ(68) ಬಂಧನವಾಗಿ 815 ದಿನಗಳಾದವು ಈ ವರೆಗೆ ಅವರನ್ನು ಯಾಕೆ ಬಂಧಿಸಲಾಗಿದೆ ಎಂಬ ಬಗ್ಗೆ ಆರೋಪ ಪಟ್ಟಿ ಸಲ್ಲಿಸಿಲ್ಲ. ಇವರನ್ನು ಕರಾಳವಾದ (Unlawful Activities) (prevention) ಕಾನೂನಿನಡಿಯಲ್ಲಿ ಬಂಧಿಸಿರುವುದರಿಂದ ಜಾಮೀನು ನಿರಾಕರಿಸಲಾಗಿದೆ.

ಇವರು ಮಾತ್ರವಲ್ಲದೆ ದಿಲ್ಲಿಯ ಹೆಸರಾಂತ ಪತ್ರಕರ್ತ ಹಾಗೂ ಮಾನವ ಹಕ್ಕುಗಳ ಪರ ಹೋರಾಟಗಾರ ಗೌತಮ ನವ್ಲಾಖ, ನಾಗಪುರದ ವಕೀಲ ಸುರೇಂದ್ರ ಗಾಡ್ಲಿಂಗ್, ನಾಗಪುರ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶೋಮಾ ಸೇನ್, ಮರಾಠಿಯ ನಟ ಹಾಗೂ ವಿದ್ರೋಹಿ ಪತ್ರಿಕೆಯ ಸಂಪಾದಕ ಸುಧೀರ್ ಡವಳೆ, ಭಾರತ ಜನಾಂದೋಲನದ ಮಹೇಶ್‌ರಾವುತ್, ದಿಲ್ಲಿಯ ರೋನಾ ವಿಲ್ಸನ್, ಮುಂಬೈನ ಲೇಖಕ ಅರುಣ್ ಪೆರೇರಾ, ಮುಂತಾದವರು ಎರಡು ವರ್ಷಗಳಿಂದ ಜೈಲಿನಲ್ಲಿ ಇದ್ದಾರೆ ಇವರಿಗೂ ವ್ಯಕ್ತಿ ಸ್ವಾತಂತ್ರ್ಯ ಅನ್ವಯಿಸುವುದಿಲ್ಲ. ಇದು ಸಾಲದೆಂಬಂತೆ ಜಾರ್ಖಂಡ್ ಆದಿವಾಸಿ ಪ್ರದೇಶದಲ್ಲಿ ಸೇವಾ ಕಾರ್ಯದಲ್ಲಿ ತಮ್ಮ ಬದುಕನ್ನು ಮುಡಿಪಾಗಿರಿಸಿದ್ದ ಫಾದರ್ ಸ್ಟಾನ್ ಸ್ವಾಮಿ ಎಂಬ ಎಂಬತೈದು ವರ್ಷದ ಕ್ರೈಸ್ತ ಪಾದ್ರಿಯನ್ನು ಇತ್ತೀಚೆಗೆ ಬಂಧಿಸಲಾಗಿದೆ. ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವ ಇವರ ಕೈ ಕಾಲು ಇವರ ಸ್ವಾಧೀನದಲ್ಲಿ ಇಲ್ಲ. ಇವರಿಂದ ರಾಷ್ಟ್ರದ ಭದ್ರತೆಗೆ ಯಾವ ಅಪಾಯವಿದೆಯೋ ಅರ್ಥವಾಗಲಿಲ್ಲ. ಇವರಿಗೂ ಸುಪ್ರಿಂಕೋರ್ಟಿನ ವ್ಯಕ್ತಿ ಸ್ವಾತಂತ್ರ್ಯ ಅನ್ವಯವಾಗುವುದಿಲ್ಲ.

ಇಷ್ಟೇ ಅಲ್ಲ ದೇಶದಲ್ಲಿ ಹನ್ನೆರಡು ಜನ ಪತ್ರಕರ್ತರು ಜೈಲಿನಲ್ಲಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಗುಜರಾತ್ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬ ಸುದ್ದಿ ಹಾಕಿದ ಪತ್ರಕರ್ತರೊಬ್ಬರನ್ನು ಬಂಧಿಸಲಾಗಿದೆ. ಇವರ ಪಾಲಿಗೂ ವ್ಯಕ್ತಿ ಸ್ವಾತಂತ್ರ್ಯ ಕನಸಿನ ಗಂಟು.

ಈ ಮೇಲಿನ ಹೋರಾಟಗಾರರು ಮತ್ತು ಚಿಂತಕರಲ್ಲದೇ ಸಾವಿರಾರು ಮಂದಿ ಅಮಾಯಕರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರು ದೇಶದ ನಾನಾ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಯಾತನೆ ಅನುಭವಿಸುತ್ತಿದ್ದಾರೆ. ತೀರ ಇತ್ತೀಚೆಗೆ ಎರಡು ತಿಂಗಳ ಹಿಂದೆ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್‌ರನ್ನು ಬಂಧಿಸಲಾಗಿದೆ. ಇವರಿಗೂ ಅರ್ನಬ್‌ಗೆ ಅನ್ವಯವಾಗಿರುವ ವ್ಯಕ್ತಿ ಸ್ವಾತಂತ್ರದ ಸವಲತ್ತು ಅನ್ವಯವಾಗುವುದಿಲ್ಲ.

ಇದು ಉದಾರೀಕರಣ ಕಾಲದ ಪ್ರಜಾಪ್ರಭುತ್ವದ ವೈಖರಿ. ಇಲ್ಲಿ ವ್ಯಕ್ತಿ ಸ್ವಾತಂತ್ರ್ಯವಾಗಲಿ ಕಾನೂನು ಆಗಲಿ ಎಲ್ಲರಿಗೂ ಸಮಾನವಾಗಿ ಅನ್ವಯವಾಗುವುದಿಲ್ಲ. ಅದನ್ನು ಪಡೆಯಲು ಹೋರಾಟ ಒಂದೇ ಉಳಿದ ದಾರಿಯಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News