ಸೋನಿಯಾ, ರಾಹುಲ್ ಗುಪ್ಕರ್ ಘೋಷಣೆಯ ಬಗ್ಗೆ ಕಾಂಗ್ರೆಸ್ ನಿಲುವನ್ನು ತಿಳಿಸಬೇಕು:ಅಮಿತ್ ಶಾ

Update: 2020-11-17 15:33 GMT

 ಹೊಸದಿಲ್ಲಿ,ನ.17: ಜಮ್ಮು-ಕಾಶ್ಮೀರವು ಎಂದೆಂದೂ ಭಾರತದ ಅಖಂಡ ಭಾಗವಾಗಿಯೇ ಉಳಿಯಲಿದೆ ಎಂದು ಒತ್ತಿ ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕಾಂಗ್ರೆಸ್ ಮತ್ತು ಗುಪ್ಕರ್ ಗ್ಯಾಂಗ್ ಜಮ್ಮು-ಕಾಶ್ಮೀರವನ್ನು ಮರಳಿ ಭಯೋತ್ಪಾದನೆ ಮತ್ತು ಪ್ರಕ್ಷುಬ್ಧತೆಯ ಯುಗಕ್ಕೆ ಒಯ್ಯಲು ಬಯಸಿವೆ ಎಂದು ಹೇಳಿದ್ದಾರೆ. 370ನೇ ವಿಧಿಯ ಮರುಸ್ಥಾಪನೆಗೆ ಜಾಗತಿಕ ನೆರವನ್ನು ಕೋರುವುದಾಗಿ ಗುಪ್ಕರ್ ಮೈತ್ರಿಕೂಟದ ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿದ ಶಾ, ಅವರಿಗೆ ಕಾಂಗ್ರೆಸ್ ಪಕ್ಷದ ಬೆಂಬಲವಿದೆಯೇ ಎಂಬ ಬಗ್ಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಗುಪ್ಕರ್ ಮೈತ್ರಿಕೂಟದ ಜೊತೆ ಕೈಜೋಡಿಸಲು ಕಾಂಗ್ರೆಸ್ ನಿರ್ಧರಿಸಿದಾಗಿನಿಂದ ಅದನ್ನು ಪೇಚಿಗೆ ಸಿಲುಕಿಸಲು ಬಿಜೆಪಿಯು ಅದರ ವಿರುದ್ಧ ದಾಳಿ ನಡೆಸುತ್ತಿದೆ.

ಗುಪ್ಕರ್ ಗ್ಯಾಂಗ್ ಜಾಗತಿಕ ಮಟ್ಟಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ವಿದೇಶಿ ಶಕ್ತಿಗಳ ಮಧ್ಯಪ್ರವೇಶವನ್ನು ಅವರು ಬಯಸುತ್ತಿದ್ದಾರೆ. ಗುಪ್ಕರ್ ಗ್ಯಾಂಗ್ ಭಾರತದ ರಾಷ್ಟ್ರಧ್ವಜವನ್ನೂ ಅವಮಾನಿಸುತ್ತಿದೆ. ಗುಪ್ಕರ್ ಗ್ಯಾಂಗಿನ ಇಂತಹ ನಡೆಗಳನ್ನು ಸೋನಿಯಾ ಮತ್ತು ರಾಹುಲ್ ಬೆಂಬಲಿಸುತ್ತಾರೆಯೇ? ಎಂದು ಅವರು ತಮ್ಮ ನಿಲುವನ್ನು ಭಾರತೀಯರಿಗೆ ಸ್ಪಷ್ಟಪಡಿಸಬೇಕು ಎಂದು ಶಾ ಮಂಗಳವಾರ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

 ಭಾರತೀಯರು ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧ ಅಪವಿತ್ರ ಜಾಗತಿಕ ಘಟಬಂಧನವನ್ನು ಸಹಿಸುವುದಿಲ್ಲ. ಗುಪ್ಕರ್ ಗ್ಯಾಂಗ್ ರಾಷ್ಟ್ರೀಯ ಮನಃಸ್ಥಿತಿಯೊಂದಿಗೆ ಸಾಗಬೇಕು,ಇಲ್ಲದಿದ್ದರೆ ಜನರೇ ಅದಕ್ಕೆ ಪಾಠ ಕಲಿಸುತ್ತಾರೆ ಎಂದು ಶಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News