ರೈತರ ಪ್ರತಿಭಟನೆಯನ್ನು ಬೆಂಬಲಿಸಿ ನ.26ರಂದು ಸಾರ್ವತ್ರಿಕ ಮುಷ್ಕರಕ್ಕೆ ಕಾರ್ಮಿಕ ಒಕ್ಕೂಟಗಳ ಕರೆ

Update: 2020-11-17 15:35 GMT

ಹೊಸದಿಲ್ಲಿ,ನ.17: ಇಂಟಕ್, ಐಟಕ್ ಎಚ್‌ಎಂಎಸ್,ಸಿಟು ಸೇರಿದಂತೆ 10 ಕಾರ್ಮಿಕ ಒಕ್ಕೂಟಗಳು ನ.26ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ನ.26 ಮತ್ತು 27ರಂದು ರಾಷ್ಟ್ರವ್ಯಾಪಿ ರೈತರ ಪ್ರತಿಭಟನೆ ಮತ್ತು ದಿಲ್ಲಿ ಜಾಥಾಕ್ಕೆ ಬೆಂಬಲವನ್ನೂ ಅವು ಪ್ರಕಟಿಸಿವೆ.

ಸೋಮವಾರ ನಡೆದ ಕೇಂದ್ರೀಯ ಕಾರ್ಮಿಕ ಒಕ್ಕೂಟಗಳು, ಕ್ಷೇತ್ರವಾರು ಸ್ವತಂತ್ರ ಒಕ್ಕೂಟಗಳು ಮತ್ತು ಸಂಘಗಳ ವರ್ಚುವಲ್ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಮೋದಿ ನೇತೃತ್ವದ ಬಿಜೆಪಿ ಸರಕಾರದ ಜನವಿರೋಧಿ,ಕಾರ್ಮಿಕ ವಿರೋಧಿ ಮತ್ತು ವಿನಾಶಕಾರಿ ನೀತಿಗಳ ವಿರುದ್ಧ ಸಾರ್ವತ್ರಿಕ ಮುಷ್ಕರಕ್ಕೆ ರಾಷ್ಟ್ರಾದ್ಯಂತ ಭರದ ಸಿದ್ಧತೆ ನಡೆಯುತ್ತಿದೆ ಎಂದು ಈ ಒಕ್ಕೂಟಗಳು ಹೇಳಿಕೆಯಲ್ಲಿ ತಿಳಿಸಿವೆ.

ಕಾರ್ಮಿಕರ ಮುಷ್ಕರಕ್ಕೆ ರೈತ ಸಂಘಟನೆಗಳು ಬೆಂಬಲವನ್ನು ಘೋಷಿಸಿರುವುದನ್ನು ಅವು ಸ್ವಾಗತಿಸಿವೆ.

 ಕಾರ್ಮಿಕ ಒಕ್ಕೂಟಗಳು ಮುಂದಿಟ್ಟಿರುವ ವಿವಿಧ ಬೇಡಿಕೆಗಳಲ್ಲಿ ಕಾರ್ಮಿಕರಿಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳ ಜೊತೆಗೆ ನೂತನ ಕೃಷಿ ಮಸೂದೆಗಳ ರದ್ದತಿಗೆ ಆಗ್ರಹವೂ ಸೇರಿದೆ.

ತನ್ಮಧ್ಯೆ,ವಿದ್ಯುತ್ ಕ್ಷೇತ್ರದಲ್ಲಿ ಕೇಂದ್ರ ಸರಕಾರದ ಖಾಸಗೀಕರಣ ನೀತಿಗಳನ್ನು ವಿರೋಧಿಸಿ ನ.26ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಅಖಿಲ ಭಾರತ ವಿದ್ಯುತ್ ಇಂಜಿನಿಯರ್‌ಗಳ ಒಕ್ಕೂಟವೂ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News