ಭಯೋತ್ಪಾದನೆ ಬೆಂಬಲಿಸುವ ದೇಶಗಳನ್ನು ಹೊಣೆಯಾಗಿಸುವ ಅಗತ್ಯವಿದೆ: ಬ್ರಿಕ್ಸ್‌ನಲ್ಲಿ ಮೋದಿ

Update: 2020-11-17 15:40 GMT

ಹೊಸದಿಲ್ಲಿ,ನ.17: ಭಯೋತ್ಪಾದನೆಯು ವಿಶ್ವಕ್ಕೆ ಎದುರಾಗಿರುವ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಮಂಗಳವಾರ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಮತ್ತು ನೆರವಾಗುತ್ತಿರುವ ದೇಶಗಳನ್ನು ಹೊಣೆಯಾಗಿಸುವ ಅಗತ್ಯವಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಪ್ರಸ್ತಾಪಿಸಿ ಹೇಳಿದರು.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಐದು ರಾಷ್ಟ್ರಗಳ ‘ಬ್ರಿಕ್ಸ್ ’ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ಸಮಸ್ಯೆಯನ್ನು ಸಂಘಟಿತ ರೀತಿಯಲ್ಲಿ ಎದುರಿಸುವ ಅಗತ್ಯವಿದೆ ಎಂದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ವಿಶ್ವ ವಾಣಿಜ್ಯ ಸಂಘಟನೆ ಮತ್ತು ಅಂತರ್ ರಾಷ್ಟ್ರೀಯ ಹಣಕಾಸು ನಿಧಿಯಂತಹ ಬಹುಪಕ್ಷೀಯ ಸಂಸ್ಥೆಗಳಲ್ಲಿ ಸುಧಾರಣೆಗಳನ್ನು ತರುವ ಅಗತ್ಯಕ್ಕೂ ಅವರು ತನ್ನ ಭಾಷಣದಲ್ಲಿ ಒತ್ತು ನೀಡಿದರು.

ಕೋವಿಡ್-19 ಬಿಕ್ಕಟ್ಟಿನ ಕುರಿತು ಮಾತನಾಡಿದ ಮೋದಿ, ಭಾರತದ ಲಸಿಕೆ ಉತ್ಪಾದನೆ ಮತ್ತು ವಿತರಣೆಯು ಮಾನವತೆಯ ಹಿತಾಸಕ್ತಿಗೆ ಅನುಗುಣವಾಗಿರಲಿದೆ ಎಂದರು.

‘ಆತ್ಮನಿರ್ಭರ ಭಾರತ ’ಅಭಿಯಾನದಡಿ ತನ್ನ ಸರಕಾರವು ಕೈಗೊಂಡಿರುವ ಸುಧಾರಣಾ ಉಪಕ್ರಮಗಳ ಬಗ್ಗೆಯೂ ಮೋದಿ ಮಾತನಾಡಿದರು.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆತಿಥ್ಯದಲ್ಲಿ ಏರ್ಪಡಿಸಲಾದ 12ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸ್ ಅವರೂ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News