ತೈವಾನ್ ಎಫ್-16 ವಿಮಾನ ನಾಪತ್ತೆ; ಎಲ್ಲ ವಿಮಾನಗಳ ಹಾರಾಟ ಸ್ಥಗಿತ

Update: 2020-11-18 18:19 GMT

ತೈಪೆ (ತೈವಾನ್), ನ. 18: ತರಬೇತಿ ಕಾರ್ಯಾಚರಣೆ ವೇಳೆ ತೈವಾನ್‌ನ ಎಫ್-16 ಯುದ್ಧ ವಿಮಾನವೊಂದು ನಾಪತ್ತೆಯಾಗಿದ್ದು, ಅದಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಈ ನಡುವೆ, ಯುದ್ಧ ವಿಮಾನಗಳ ಸುರಕ್ಷತೆಯನ್ನು ಖಾತರಿಪಡಿಸುವುದಕ್ಕಾಗಿ ತೈವಾನ್‌ನಲ್ಲಿರುವ ಎಲ್ಲ ಎಫ್-16 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಈ ನಿರ್ಧಾರದ ಹಿನ್ನೆಲೆಯಲ್ಲಿ, ಸುಮಾರು 150 ವಿಮಾನಗಳು ಹಾರಾಟವನ್ನು ನಿಲ್ಲಿಸಿವೆ. ಹಾಗಾಗಿ, ಚೀನೀ ಯುದ್ಧ ವಿಮಾನಗಳು ತೈವಾನ್ ಗಡಿಯೊಳಗೆ ನುಸುಳಿದರೆ ಅವುಗಳಿಗೆ ಎಚ್ಚರಿಕೆ ನೀಡಲು ತೈವಾನ್ ಬಳಿ ಅತ್ಯಂತ ಸೀಮಿತ ಸಂಖ್ಯೆಯ ವಿಮಾನಗಳಷ್ಟೇ ಉಳಿದಿವೆ. ಇತ್ತೀಚಿನ ತಿಂಗಳುಗಳಲ್ಲಿ ಚೀನಾ ಯುದ್ಧ ವಿಮಾನಗಳ ಅತಿಕ್ರಮಣ ಭಾರೀ ಸಂಖ್ಯೆಯಲ್ಲಿ ಹೆಚ್ಚಿದೆ.

ಒಂಟಿ ಆಸನದ ಎಫ್-16 ವಿಮಾನವೊಂದು ಮಂಗಳವಾರ ರಾತ್ರಿ ಪೂರ್ವ ತೈವಾನ್‌ನಲ್ಲಿರುವ ಹುವಾಲೀನ್ ವಾಯು ನೆಲೆಯಿಂದ ಹಾರಾಟ ಆರಂಭಿಸಿದ ಎರಡು ನಿಮಿಷಗಳ ಬಳಿಕ ಸುಮಾರು 1,800 ಮೀಟರ್ ಎತ್ತರದಲ್ಲಿ ರಾಡಾರ್‌ನಿಂದ ಮರೆಯಾಗಿದೆ ಎಂದು ತೈವಾನ್ ವಾಯು ಪಡೆ ತಿಳಿಸಿದೆ.

ಕೇವಲ ಮೂರು ವಾರಗಳ ಹಿಂದೆ, ತೈವಾನ್‌ನ ಎಫ್-5ಇ ಯುದ್ಧ ವಿಮಾನವೊಂದು ತರಬೇತಿಯ ವೇಳೆ ಸಮುದ್ರಕ್ಕೆ ಅಪ್ಪಳಿಸಿದ್ದು, ಅದರ ಪೈಲಟ್ ಮೃತಪಟ್ಟಿದ್ದಾರೆ. ಆಗಲೂ ಇದೇ ಮಾದರಿಯಲ್ಲಿ ಸುರಕ್ಷತಾ ತಪಾಸಣೆಗಾಗಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News