ರಾಜಕುಮಾರಿ ಡಯಾನಾರ 1995ರ ಸಂದರ್ಶನದ ಬಗ್ಗೆ ಬಿಬಿಸಿ ತನಿಖೆ

Update: 2020-11-19 16:57 GMT
ಫೋಟೊ ಕೃಪೆ: twitter.com

ಲಂಡನ್, ನ. 19: 1995ರಲ್ಲಿ ಬ್ರಿಟನ್ ರಾಜಕುಮಾರಿ ಡಯಾನಾರಿಂದ ಸ್ಫೋಟಕ ಸಂದರ್ಶನವನ್ನು ಹೇಗೆ ಪಡೆದುಕೊಳ್ಳಲಾಯಿತು ಎಂಬ ಬಗ್ಗೆ ತಕ್ಷಣದಿಂದ ತನಿಖೆ ಆರಂಭಿಸಲಾಗಿದೆ ಎಂದು ಸುದ್ದಿ ವಾಹಿನಿ ಬ್ರಿಟಿಶ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ ಬುಧವಾರ ಘೋಷಿಸಿದೆ.

ಬಿಬಿಸಿಯಲ್ಲಿ ಪ್ರಸಾರವಾದ ಆ ಸಂದರ್ಶನವು ಡಯಾನಾ ಮತ್ತು ರಾಜಕುಮಾರ ಚಾರ್ಲ್ಸ್ ದಾಂಪತ್ಯದಲ್ಲಿ ಬಿರುಕು ಮೂಡಿರುವುದನ್ನು ಬಹಿರಂಗಪಡಿಸಿತ್ತು.

ಆ ಸಂದರ್ಶನದ ಬಗ್ಗೆ ತನಿಖೆಯಾಗಬೇಕೆಂದು ದಿವಂಗತ ರಾಜಕುಮಾರಿಯ ಸಹೋದರ ಚಾರ್ಲ್ಸ್ ಸ್ಪೆನ್ಸರ್ ಒತ್ತಾಯಿಸಿದ ಬಳಿಕ ಬಿಬಿಸಿಯು ಈ ತನಿಖೆಯನ್ನು ನಡೆಸುತ್ತಿದೆ. ತನಿಖೆಯ ನೇತೃತ್ವವನ್ನು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಾನ್ ಡೈಸನ್ ವಹಿಸಿಕೊಳ್ಳಲಿದ್ದಾರೆ.

ಆ ಸಂದರ್ಶನವನ್ನು ‘ಪ್ಯಾನರಾಮ’ ಕಾರ್ಯಕ್ರಮದ ನಿರೂಪಕ ಮಾರ್ಟಿನ್ ಬಶೀರ್ ಮಾಡಿದ್ದರು. ಆ ಸಂದರ್ಶನದಲ್ಲಿ ಭಾಗವಹಿಸುವಂತೆ ನನ್ನ ಸಹೋದರಿ ಡಯಾನಾರ ಮನವೊಲಿಸುವುದಕ್ಕಾಗಿ ಮಾರ್ಟಿನ್ ಬಶೀರ್ ನನಗೆ ನಕಲಿ ದಾಖಲೆಗಳನ್ನು ತೋರಿಸಿದ್ದರು ಎಂದು ಸ್ಪೆನ್ಸರ್ ಆರೋಪಿಸಿದ್ದಾರೆ.

1995 ನವೆಂಬರ್‌ನಲ್ಲಿ ಪ್ರಸಾರವಾದ ಸಂದರ್ಶನದಲ್ಲಿ, ರಾಜಕುಮಾರಿ ಡಯಾನಾ ತನ್ನ ಬಿರುಕುಬಿಡುತ್ತಿರುವ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದರು. ಆ ಸಂದರ್ಶನವನ್ನು ದಾಖಲೆಯ 2.28 ಕೋಟಿ ಮಂದಿ ವೀಕ್ಷಿಸಿದ್ದರು.

‘‘ನನ್ನ ದಾಂಪತ್ಯದಲ್ಲಿ ಮೂವರಿದ್ದೇವೆ- ನಾನು, ಗಂಡ ಚಾರ್ಲ್ಸ್ ಮತ್ತು ಅವರ ದೀರ್ಘಕಾಲೀನ ಪ್ರೇಮಿ ಕ್ಯಾಮಿಲಾ ಪಾರ್ಕರ್ ಬೋಲ್ಸ್’’ ಎಂಬ ಡಯಾನಾರ ಮಾತುಗಳು ಭಾರೀ ಪ್ರಸಿದ್ಧವಾಗಿದ್ದವು. ಅದೇ ವೇಳೆ, ನಾನು ಕೂಡ ಗಂಡನಿಗೆ ನಿಷ್ಠಳಾಗಿಲ್ಲ ಎನ್ನುವುದನ್ನೂ ಅವರು ಆ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.

ಡಯಾನಾ ಮತ್ತು ಚಾರ್ಲ್ಸ್ 1996ರಲ್ಲಿ ಔಪಚಾರಿಕವಾಗಿ ಬೇರ್ಪಟ್ಟರು. 1997ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಅವರು ಮೃತಪಟ್ಟರು.

 ಡಯಾನಾರಿಂದ ಸಂದರ್ಶನ ಪಡೆಯುವುದಕ್ಕಾಗಿ ಮಾರ್ಟಿನ್ ಬಶೀರ್ ವಾಮ ಮಾರ್ಗ ಬಳಸಿದ್ದರು ಎಂಬ ಆರೋಪಗಳು ಬಳಿಕ ಮುನ್ನೆಲೆಗೆ ಬಂದಿವೆ. ರಾಜಕುಮಾರಿ ಮೇಲೆ ಬೇಹುಗಾರಿಕೆ ನಡೆಸುವುದಕ್ಕಾಗಿ ಅವರ ಸ್ವಂತ ಸಿಬ್ಬಂದಿಗೆ ಹಣ ನೀಡಲಾಗುತ್ತಿದೆ ಎಂದು ಹೇಳಿ ಅವರು ರಾಜಕುಮಾರಿಯ ವಿಶ್ವಾಸ ಗಳಿಸಿದ್ದರು ಎನ್ನುವ ಆರೋಪಗಳಿವೆ. ಅದನ್ನು ಸಾಬೀತುಪಡಿಸುವುದಕ್ಕಾಗಿ ಸಿಬ್ಬಂದಿಯ ನಕಲಿ ಬ್ಯಾಂಕ್ ವಿವರಗಳನ್ನು ಅವರು ಚಾರ್ಲ್ಸ್ ಸ್ಪೆನ್ಸರ್‌ಗೆ ತೋರಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News