×
Ad

ಅಂತರ್‌ರಾಷ್ಟ್ರೀಯ ಬದ್ಧತೆಗಳ ಉಲ್ಲಂಘಿಸಿರುವ ಚೀನಾ: ಐದು ದೇಶಗಳಿಂದ ಆರೋಪ

Update: 2020-11-19 22:32 IST

ವಾಶಿಂಗ್ಟನ್, ನ. 19: ಹಾಂಕಾಂಗ್ ಸಂಸತ್ತಿನಿಂದ ಪ್ರಜಾಪ್ರಭುತ್ವ ಪರ ಸಂಸದರನ್ನು ಹೊರದಬ್ಬುವ ಮೂಲಕ ಚೀನಾವು ತನ್ನ ಅಂತರ್‌ರಾಷ್ಟ್ರೀಯ ಬದ್ಧತೆಗಳನ್ನು ಉಲ್ಲಂಘಿಸಿದೆ ಎಂದು ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ಕೆನಡ ಮತ್ತು ನ್ಯೂಝಿಲ್ಯಾಂಡ್ ಬುಧವಾರ ಆರೋಪಿಸಿವೆ.

 ತನ್ನ ವಸಾಹತು ಆಗಿದ್ದ ಹಾಂಕಾಂಗನ್ನು ಬ್ರಿಟನ್ 1997ರಲ್ಲಿ ಚೀನಾಕ್ಕೆ ಮರಳಿಸಿದ ಬಳಿಕ ಅಲ್ಲಿನ ಸ್ವಾಯತ್ತೆಯನ್ನು ಉಳಿಸಿಕೊಂಡು ಬರುವುದಾಗಿ 1984ರಲ್ಲಿ ನೀಡಿರುವ ವಾಗ್ದಾನವನ್ನು ಚೀನಾ ಉಲ್ಲಂಘಿಸುತ್ತಿದೆ ಎಂದು ಈ ಐದು ದೇಶಗಳ ವಿದೇಶ ಸಚಿವರು ಹೇಳಿದ್ದಾರೆ.

ಚೀನಾವು ಇತ್ತೀಚೆಗೆ ಹಾಂಕಾಂಗ್‌ನಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಭದ್ರತಾ ಕಾನೂನಿನ ಅಡಿಯಲ್ಲಿ ಹಾಂಕಾಂಗ್‌ನ ನಾಲ್ವರು ಪ್ರತಿಪಕ್ಷ ಸಂಸದರನ್ನು ಅನರ್ಹಗೊಳಿಸಲಾಗಿತ್ತು. ಅದನ್ನು ಪ್ರತಿಭಟಿಸಿ ಉಳಿದ ಪ್ರಜಾಪ್ರಭುತ್ವ ಪರ ಸಂಸದರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

 ಕಳೆದ ವರ್ಷ ಹಾಂಕಾಂಗ್‌ನಲ್ಲಿ ನಡೆದ ಬೃಹತ್ ಪ್ರಜಾಪ್ರಭುತ್ವ ಪರ ಧರಣಿಗಳಿಗೆ ಪ್ರತಿಯಾಗಿ ಚೀನಾವು ದಮನಕಾರಕ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೊಳಿಸಿದೆ.

‘‘ಹಾಂಕಾಂಗ್‌ನಲ್ಲಿ ಚೀನಾ ತೆಗೆದುಕೊಂಡಿರುವ ದಮನಕಾರಕ ಕ್ರಮಗಳು, ವಿಶ್ವಸಂಸ್ಥೆಯಲ್ಲಿ ನೋಂದಣಿಯಾಗಿರುವ ಚೀನಾ-ಬ್ರಿಟನ್ ಜಂಟಿ ಘೋಷಣೆಯಡಿಯಲ್ಲಿ ಚೀನಾ ಹೊಂದಿರುವ ಬದ್ಧತೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ’’ ಎಂದು ಈ ದೇಶಗಳು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿವೆ.

ಹಾಂಕಾಂಗ್‌ನಲ್ಲಿ ಮಾನವಹಕ್ಕು ಉಲ್ಲಂಘನೆ ಖಂಡಿಸಿದ ಅಮೆರಿಕ ಸಂಸತ್ತು

ವಾಶಿಂಗ್ಟನ್, ನ. 19: ಹಾಂಕಾಂಗ್‌ನಲ್ಲಿ ಚೀನಾ ನಡೆಸುತ್ತಿರುವ ಮಾನವಹಕ್ಕು ಉಲ್ಲಂಘನೆಗಳು ಹಾಗೂ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯದ ದಮನವನ್ನು ಖಂಡಿಸುವ ನಿರ್ಣಯವೊಂದನ್ನು ಅವೆುರಿಕದ ಸಂಸತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದೆ.

 ನಿರ್ಣಯವು ಚೀನಾ ಸರಕಾರದ ಕೃತ್ಯಗಳನ್ನು ಖಂಡಿಸಿದೆ ಹಾಗೂ ಈ ಕೃತ್ಯಗಳು ಹಾಂಕಾಂಗ್ ನಿವಾಸಿಗಳ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ ಹಾಗೂ ಅವರ ಅತ್ಯುನ್ನತ ಮಟ್ಟದ ಸ್ವಾಯತ್ತೆಯನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದೆ.

ಹಾಂಕಾಂಗ್‌ನಲ್ಲಿನ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಲು ಮಿತ್ರ ದೇಶಗಳೊಂದಿಗೆ ಸಮನ್ವಯ ಸಾಧಿಸುವಂತೆ ನಿರ್ಣಯವು ಅಮೆರಿಕ ಸರಕಾರವನ್ನು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News