ಆಸ್ಟ್ರೇಲಿಯ ಸೈನಿಕರಿಂದ 39 ಅಫ್ಘಾನ್ ನಾಗರಿಕರ ಹತ್ಯೆ: ಕ್ಷಮೆ ಕೋರಿದ ಸೇನಾ ಮುಖ್ಯಸ್ಥ

Update: 2020-11-19 17:16 GMT

ಕ್ಯಾನ್‌ಬೆರ (ಆಸ್ಟ್ರೇಲಿಯ), ನ. 19: ಅಫ್ಘಾನಿಸ್ತಾನದಲ್ಲಿ ಯುದ್ಧ ನಡೆಯುತ್ತಿದ್ದ ವೇಳೆ ನನ್ನ ವಿಶೇಷ ಪಡೆಗಳು ಕಾನೂನುಬಾಹಿರವಾಗಿ 39 ನಿರಾಯುಧ ನಾಗರಿಕರು ಮತ್ತು ಕೈದಿಗಳನ್ನು ಕೊಂದಿರುವ ಬಗ್ಗೆ ವಿಶ್ವಾಸಾರ್ಹ ಪುರಾವೆಯಿದೆ ಎಂದು ಆಸ್ಟ್ರೇಲಿಯ ಸೇನಾ ಮುಖ್ಯಸ್ಥ ಆ್ಯಂಗಸ್ ಕ್ಯಾಂಪ್‌ಬೆಲ್ ಹೇಳಿದ್ದಾರೆ. ಈ ಕುರಿತ ತನಿಖೆಯನ್ನು ಅವರು ವಿಶೇಷ ಯುದ್ಧಾಪರಾಧಗಳ ಪ್ರಾಸಿಕ್ಯೂಟರ್‌ಗೆ ವಹಿಸಿದ್ದಾರೆ.

2005 ಮತ್ತು 2016ರ ನಡುವೆ ಅಫ್ಘಾನಿಸ್ತಾನದಲ್ಲಿ ಸೇನೆ ನಡೆಸಿದ ದುರಾಕ್ರಮಣಗಳ ಬಗ್ಗೆ ಹಲವು ವರ್ಷಗಳಿಂದ ನಡೆದ ತನಿಖೆಯ ವರದಿಯನ್ನು ಸ್ವೀಕರಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಉನ್ನತ ಮಟ್ಟದ ಪಡೆಗಳಿಗೆ ಶಿಕ್ಷೆಯಿಂದ ವಿನಾಯಿತಿ ನೀಡುವ ಸಂಸ್ಕೃತಿಯಿಂದಾಗಿ ಒಂದು ದಶಕದ ಅವಧಿಯಲ್ಲಿ ಕೊಲೆಗಳ ಸರಮಾಲೆ ಮತ್ತು ಅವುಗಳನ್ನು ಮುಚ್ಚಿಹಾಕುವ ಪ್ರಕ್ರಿಯೆ ನಡೆದಿದೆ ಎಂದು ಕ್ಯಾಂಪ್‌ಬೆಲ್ ಹೇಳಿದರು.

‘‘ಕೆಲವು ಗಸ್ತು ಸೈನಿಕರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ, ನಿಯಮಗಳನ್ನು ಮುರಿದಿದ್ದಾರೆ, ಸುಳ್ಳು ಕತೆಗಳನ್ನು ಸೃಷ್ಟಿಸಿದ್ದಾರೆ ಮತ್ತು ಕೈದಿಗಳನ್ನು ಕೊಂದಿದ್ದಾರೆ’’ ಎಂದು ಕ್ಯಾಂಪ್‌ಬೆಲ್ ಹೇಳಿದರು.

‘‘ನಮ್ಮ ಸೈನಿಕರ ಈ ಕೃತ್ಯಗಳಿಗಾಗಿ ನಾನು ಅಫ್ಘಾನಿಸ್ತಾನದ ಜನರ ಕ್ಷಮೆ ಕೋರುವೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News