ಎನ್‌ಸಿಎಯಲ್ಲಿ ಫಿಟ್‌ನೆಸ್ ತರಬೇತಿ ಪ್ರಾರಂಭಿಸಿದ ರೋಹಿತ್ ಶರ್ಮಾ

Update: 2020-11-19 18:35 GMT

ಬೆಂಗಳೂರು: ಆಸ್ಟ್ರೇಲಿಯಕ್ಕೆ ತೆರಳಲಿರುವ ಭಾರತದ ಕ್ರಿಕೆಟ್‌ತಂಡದ ಸಾರ್ ಆಟಗಾರ ರೋಹಿತ್ ಶರ್ಮಾ ಫಿಟ್‌ನೆಸ್ ತರಬೇತಿಯನ್ನು ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ( ಎನ್‌ಸಿಎ) ಗುರುವಾರ ಪ್ರಾರಂಭಿಸಿದರು.

ಮುಂಬೈ ಇಂಡಿಯನ್ಸ್ ಪರ ಫೈನಲ್ ಸೇರಿದಂತೆ ಎರಡು ಐಪಿಎಲ್ ಪಂದ್ಯಗಳನ್ನು ಆಡಿದ ನಂತರ ಆಯ್ಕೆ ಸಮಿತಿಯು ರೋಹಿತ್‌ರನ್ನು ಪರಿಷ್ಕೃತ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

 ರೋಹಿತ್ ತಾನು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವುದಾಗಿ ಹೇಳಿದ್ದರೂ, ಐಪಿಎಲ್ ಸಮಯದಲ್ಲಿ ಅವರು ಅನುಭವಿಸಿದ ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕು ಎಂದು ಬಿಸಿಸಿಐ ಭಾವಿಸಿ ಅವರನ್ನು ಆರಂಭದಲ್ಲಿ ಟೆಸ್ಟ್ ತಂಡಕ್ಕೆ ಸೇರಿಸಿಕೊಂಡಿರಲಿಲ್ಲ. ರೋಹಿತ್ ನೆಟ್‌ನಲ್ಲಿ ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದರೂ, ಅವರ ಫಿಟ್‌ನೆಸ್ ವಿಚಾರವು ಭಾರೀ ಚರ್ಚೆಗೆ ಕಾರಣವಾಯಿತು.

ಐಪಿಎಲ್ ಫೈನಲ್‌ನಲ್ಲಿ ರೋಹಿತ್ ಶರ್ಮಾ 68 ರನ್ ಗಳಿಸಿದ್ದರು. ಅವರ ತಂಡ ಮುಂಬೈ ಇಂಡಿಯನ್ಸ್ ಜಯ ಗಳಿಸಿತ್ತು.

 ಆಸ್ಟ್ರೇಲಿಯದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಬಳಿಕ ಉಳಿದ ಪಂದ್ಯಗಳಿಗೆ ನಾಯಕ ವಿರಾಟ್ ಕೊಹ್ಲಿ ಲಭ್ಯವಾಗುವುದಿಲ್ಲವಾದ್ದರಿಂದ ರೋಹಿತ್ ಅವರ ಫಿಟ್‌ನೆಸ್ ವಿಚಾರ ಇನ್ನಷ್ಟು ನಿರ್ಣಾಯಕವಾಗಿದೆ.

ಹಿರಿಯ ವೇಗಿ ಇಶಾಂತ್ ಶರ್ಮಾ ಕೂಡಾ ಎನ್‌ಸಿಎಯಲ್ಲಿ ತರಬೇತಿ ಪಡೆಯುತ್ತಿದ್ದಾರೆ, ಮುಖ್ಯ ಆಯ್ಕೆಗಾರ ಸುನೀಲ್ ಜೋಶಿ ಮತ್ತು ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರ ಮೇಲ್ವಿಚಾರಣೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

 ಇಶಾಂತ್ ಶರ್ಮಾ ಮತ್ತು ರೋಹಿತ್ ಶರ್ಮಾ ಇಬ್ಬರೂ ಒಟ್ಟಿಗೆ ಆಸ್ಟ್ರೇಲಿಯಕ್ಕೆ ವಿಮಾನ ಹತ್ತಲಿದ್ದಾರೆ ಮತ್ತು ತಂಡವನ್ನು ಸೇರುವ ಮೊದಲು 14 ದಿನಗಳ ಕ್ವಾರಂಟೈನ್‌ನಲ್ಲಿ ಉಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News