ಚುನಾವಣಾ ಫಲಿತಾಂಶ ರದ್ದುಪಡಿಸಲು ರಿಪಬ್ಲಿಕನ್ ನಾಯಕರಿಂದ ಪ್ರಯತ್ನ

Update: 2020-11-20 17:24 GMT

ವಾಶಿಂಗ್ಟನ್, ನ. 20: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ರದ್ದುಪಡಿಸಲು ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ನಾಯಕರು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಳವಳ ವ್ಯಕ್ತಪಡಿಸಿದ್ದಾರೆ.

ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ವಿಜಯಿಯಾಗಿದ್ದಾರೆಂದು ಬಿಂಬಿಸಲಾಗಿದೆ. ಆದರೆ, ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಸೋಲನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಅವರು ಹಲವಾರು ರಾಜ್ಯಗಳಲ್ಲಿ ಹಲವಾರು ಮೊಕದ್ದಮೆಗಳನ್ನು ಹೂಡಿದ್ದಾರೆ.

 ‘‘ಡೆಮಾಕ್ರಟಿಕ್ ಪಕ್ಷದವರಾಗಿರಲಿ, ರಿಪಬ್ಲಿಕನ್ ಪಕ್ಷದವರಾಗಿರಲಿ ಅಥವಾ ಪಕ್ಷೇತರರಾಗಿರಲಿ ಪ್ರತಿಯೊಬ್ಬ ಅಮೆರಿಕನ್ ಪ್ರಜೆಯಂತೆ ನಾನೂ ಕಳವಳಗೊಂಡಿದ್ದೇನೆ. ಅಕ್ರಮ ಅಥವಾ ವಂಚನೆ ನಡೆದಿದೆ ಎನ್ನುವುದನ್ನು ತೋರಿಸುವ ಯಾವುದೇ ಪುರಾವೆಯಿಲ್ಲದೆ ಜನಾದೇಶವನ್ನು ತಡೆಯಲು, ನಿರಾಕರಿಸಲು ಮತ್ತು ರದ್ದುಪಡಿಸಲು ಪ್ರಯತ್ನಗಳು ನಡೆಯುತ್ತಿರುವಾಗ ಪ್ರತಿಯೊಬ್ಬರೂ ಕಳವಳಗೊಳ್ಳಲೇ ಬೇಕು’’ ಎಂದು ಎಮ್‌ಎಸ್‌ಎನ್‌ಬಿಸಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಒಬಾಮ ಹೇಳಿದರು.

ಅದೇ ವೇಳೆ, ಟ್ರಂಪ್‌ರ ಆಧಾರರಹಿತ ಆರೋಪಗಳನ್ನು ಪ್ರಕಟಿಸುತ್ತಿರುವ ಬಲಪಂಥೀಯ ಒಲವಿನ ಸುದ್ದಿವಾಹಿನಿಗಳನ್ನೂ ಅವರು ಟೀಕಿಸಿದರು.

‘‘ಈ ವಿಷಯದಲ್ಲಿ ಅವರಿಗೆ ನ್ಯಾಯಾಲಯಗಳಲ್ಲಿ ಪದೇ ಪದೇ ಸೋಲಾಗುತ್ತಿದೆ. ಈ ಆಧಾರರಹಿತ ಆರೋಪಗಳನ್ನು ಟ್ರಂಪ್ ಮಾಡಿದಾಗ ನನಗೆ ಆಶ್ಚರ್ಯವಾಗುವುದಿಲ್ಲ. ಸತ್ಯದೊಂದಿಗೆ ಅವರ ಒಡನಾಟ ತೀರಾ ಕಡಿಮೆ ಎನ್ನುವುದನ್ನು ಅವರೇ ತೋರಿಸಿಕೊಂಡಿದ್ದಾರೆ. ಟ್ರಂಪ್‌ರ ಆರೋಪಗಳನ್ನು ಹಲವಾರು ರಿಪಬ್ಲಿಕನ್ ನಾಯಕರು ಪುನರುಚ್ಚರಿಸಿದಾಗ ನಾನು ಹೆಚ್ಚು ಕಳವಳಪಡುತ್ತೇನೆ’’ ಎಂದರು.

2008 ಮತ್ತು 2020ರ ನಡುವೆ ವ್ಯತ್ಯಾಸವಿದೆ ಎಂದು ಒಬಾಮ ಹೇಳಿದರು. 2008ರಲ್ಲಿ ಅಂದಿನ ರಿಪಬ್ಲಿಕನ್ ಅಧ್ಯಕ್ಷ ಜಾರ್ಜ್ ಬುಶ್ ಸುಲಲಿತವಾಗಿ ಡೆಮಾಕ್ರಟಿಕ್ ಪಕ್ಷದ ಒಬಾಮಗೆ ಅಧಿಕಾರ ಹಸ್ತಾಂತರ ಮಾಡಿದ್ದರೆ, 2020ರಲ್ಲಿ ರಿಪಬ್ಲಿಕನ್ ಪಕ್ಷದವರೇ ಆಗಿರುವ ಟ್ರಂಪ್ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದಾರೆ.

ಟ್ರಂಪ್‌ರಿಂದ ಪ್ರಜಾಪ್ರಭುತ್ವಕ್ಕೆ ಹಾನಿ: ಬೈಡನ್

‘ಅವರಿಗೆ ಗೊತ್ತಿದೆ ತಾನು ಗೆದ್ದಿಲ್ಲ ಎಂದು’

ವಿಲ್ಮಿಂಗ್ಟನ್ (ಅಮೆರಿಕ), ನ. 20: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಬದಲಿಸಲು ಪ್ರಯತ್ನಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ದೇಶದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸುವ ಮೂಲಕ ಹಾಗೂ ಚುನಾವಣಾ ಅಧಿಕಾರಿಗಳನ್ನು ವೈಯಕ್ತಿಕವಾಗಿ ಸಂಪರ್ಕಿಸುವ ಮೂಲಕ ಫಲಿತಾಂಶವನ್ನು ಬದಲಿಸುವ ಅಭಿಯಾನವೊಂದನ್ನು ಅವರು ಕೈಗೆತ್ತಿಕೊಂಡಿದ್ದಾರೆ ಎಂದು ತನ್ನ ತವರು ರಾಜ್ಯ ಡೆಲಾವೇರ್‌ನ ವಿಲ್ಮಿಂಗ್ಟನ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

‘‘ಈ ವ್ಯಕ್ತಿ ಯಾವ ರೀತಿಯಲ್ಲಿ ಯೋಚಿಸುತ್ತಾರೆ ಎನ್ನುವುದನ್ನು ಊಹಿಸುವುದೂ ಸಾಧ್ಯವಿಲ್ಲ. ತಾನು ಗೆದ್ದಿಲ್ಲ, ತಾನು ಗೆಲ್ಲುವುದೂ ಇಲ್ಲ ಹಾಗೂ ಜನವರಿ 20ರಂದು ನಾವು ಅಧಿಕಾರ ಸ್ವೀಕರಿಸುತ್ತೇವೆ ಎನ್ನುವುದು ಅವರಿಗೆ ತಿಳಿದಿದೆ ಎಂಬ ಬಗ್ಗೆ ನನಗೆ ಭರವಸೆಯಿದೆ’’ ಎಂದು ಬೈಡನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News