ದೇಶದೊಳಗೆ ಚೀನಾದ ಗ್ರಾಮವಿಲ್ಲ: ಭೂತಾನ್

Update: 2020-11-20 17:41 GMT

ಥಿಂಪು (ಭೂತಾನ್), ನ. 20: ಭೂತಾನ್ ಭೂಪ್ರದೇಶದಲ್ಲಿ ಎರಡು ಕಿಲೋಮೀಟರ್‌ಗಿಂತಲೂ ಹೆಚ್ಚು ಒಳಗೆ ವಿವಾದಾಸ್ಪದ ಡೋಕಾಲ ಪ್ರಸ್ಥಭೂಮಿಯ ಸಮೀಪ ಚೀನಾವು ಗ್ರಾಮವೊಂದನ್ನು ನಿರ್ಮಿಸಿದೆ ಎನ್ನುವ ವರದಿಗಳನ್ನು ಭೂತಾನ್ ಶುಕ್ರವಾರ ನಿರಾಕರಿಸಿದೆ.

ಉಪಗ್ರಹ ಚಿತ್ರಗಳು ಭೂತಾನ್ ಭೂಪ್ರದೇಶದಲ್ಲಿ ಚೀನಾ ಸ್ಥಾಪಿಸಿರುವ ಗ್ರಾಮವನ್ನು ಸ್ಪಷ್ಟವಾಗಿ ತೋರಿಸಿರುವ ಗ್ರಾಮದ ವಿವರವಾದ ನಕ್ಷೆಯ ಹೊರತಾಗಿಯೂ ಭೂತಾನ್ ಈ ನಿರಾಕರಣೆಯನ್ನು ನೀಡಿದೆ.

ಭೂತಾನ್ ತನ್ನದೆಂದು ಹೇಳಿಕೊಳ್ಳುವ ಪ್ರದೇಶದಲ್ಲೇ ಚೀನಾದ ಗ್ರಾಮವು ಸ್ಥಾಪನೆಯಾಗಿದೆ ಎನ್ನುವುದನ್ನು ಭೂತಾನ್ ಸರಕಾರದ ಅಧಿಕೃತ ನಕ್ಷೆಯೂ ತೋರಿಸಿದೆ.

ಚೀನಾದ ಅತಿಕ್ರಮಣಕ್ಕೆ ಸಂಬಂಧಿಸಿದ ‘ಎನ್‌ಡಿಟಿವಿ’ ವರದಿಗೆ ಪ್ರತಿಕ್ರಿಯಿಸಿರುವ ಭೂತಾನ್‌ನ ಭಾರತ ರಾಯಭಾರಿ ಮೇಜರ್ ಜನರಲ್ ವೆಟ್ಸೋಪ್ ನಮ್‌ಗ್ಯೆಲ್, ‘‘ಭೂತಾನ್ ಒಳಗೆ ಚೀನಾದ ಗ್ರಾಮವಿಲ್ಲ’’ ಎಂದಿದ್ದಾರೆ.

ವಿವಾದಿತ ಪ್ರದೇಶದಲ್ಲಿನ ಗಡಿಯನ್ನು ಮರುಹೊಂದಿಸುವ ಬಗ್ಗೆ ಭೂತಾನ್ ಮತ್ತು ಚೀನಾ ನಡುವೆ ಒಪ್ಪಂದವೇನಾದರೂ ಏರ್ಪಟ್ಟಿದೆಯೇ ಎಂಬ ಪ್ರಶ್ನೆಗೆ, ‘‘ಗಡಿ ವಿವಾದದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’’ ಎಂದರು.

ಅದೇ ವೇಳೆ, ಭೂತಾನ್ ಮತ್ತು ಚೀನಾಗಳು ಗಡಿ ವಿವಾದಕ್ಕೆ ಸಂಬಂಧಿಸಿ ಮಾತುಕತೆಯಲ್ಲಿ ತೊಡಗಿವೆ ಎಂಬುದನ್ನು ಅವರು ಖಚಿತಪಡಿಸಿದರು. ಆದರೆ, ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ನಿಧಾನವಾಗಿ ಸಾಗುತ್ತಿದೆ.

ಚೀನಾದ ಸರಕಾರಿ ಒಡೆತನದ ಸಿಜಿಟಿಎನ್ ಟಿವಿಯ ಹಿರಿಯ ಅಧಿಕಾರಿ ಶೆನ್ ಶಿವೇ ಗುರುವಾರ ಭೂತಾನ್ ಗಡಿಯ ಒಳಗೆ ಚೀನಾ ಸ್ಥಾಪಿಸಿರುವ ಗ್ರಾಮದ ಹಲವು ಚಿತ್ರಗಳನ್ನು ಪ್ರಕಟಿಸಿದ್ದಾರೆ. ಚಿತ್ರಗಳು ರಸ್ತೆ ಮತ್ತು ನದಿಯೊಂದರ ಪಕ್ಕದಲ್ಲಿ ನಿರ್ಮಿಸಲಾಗಿರುವ ಮರದ ಮನೆಗಳನ್ನು ತೋರಿಸಿವೆ. ‘‘ಈಗ, ಹೊಸದಾಗಿ ನಿರ್ಮಿಸಲಾಗಿರುವ ಪಂಗ್ಡ ಗ್ರಾಮದಲ್ಲಿ ಖಾಯಂ ನಿವಾಸಿಗಳು ವಾಸಿಸುತ್ತಿದ್ದಾರೆ. ಗ್ರಾಮವು ಯಾಡೊಂಗ್ ಕೌಂಟಿಯಿಂದ ದಕ್ಷಿಣಕ್ಕೆ 35 ಕಿ.ಮೀ. ದೂರದಲ್ಲಿರುವ ಕಣಿವೆಯ ಉದ್ದಕ್ಕೂ ಹಬ್ಬಿದೆ. ಗ್ರಾಮದ ಸ್ಥಳವನ್ನು ತೋರಿಸುವ ನಕ್ಷೆ ಇಲ್ಲಿದೆ’’ ಎಂಬುದಾಗಿಯೂ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News