ಅಧಿಕಾರ ಹಸ್ತಾಂತರದ ಖರ್ಚಿಗೆ ದೇಣಿಗೆ ಕೊಡಿ ಎಂದ ಅಮೆರಿಕಾದ ನಿಯೋಜಿತ ಅಧ್ಯಕ್ಷ ಬೈಡನ್ !

Update: 2020-11-21 11:23 GMT

ವಾಷಿಂಗ್ಟನ್: ಅಮೆರಿಕಾದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ದೇಣಿಗೆ ನೀಡುವಂತೆ ಜನರಿಗೆ ಮಾಡಿದ ಮನವಿಗೆ ಹಲವಾರು ಸ್ವಾರಸ್ಯಕರ ಪ್ರತಿಕ್ರಿಯೆಗಳು ದೊರಕಿವೆ.

"ಅಧ್ಯಕ್ಷ ಟ್ರಂಪ್ ಅವರು ಸೋಲೊಪ್ಪಿಕೊಳ್ಳಲು ನಿರಾಕರಿಸಿರುವುದರಿಂದ ಹಾಗೂ ಅಧಿಕಾರ ಹಸ್ತಾಂತರವನ್ನು ವಿಳಂಬಿಸುತ್ತಿರುವುದರಿಂದ  ಅಧಿಕಾರವನ್ನು ವಹಿಸಿಕೊಳ್ಳಲು ನಮಗೆ ನಾವೇ ಹಣಕಾಸು ಏರ್ಪಾಟು ಮಾಡಬೇಕಿದೆ, ನಿಮ್ಮ ಸಹಾಯ ಬೇಕಿದೆ,'' ಎಂದು ಬೈಡನ್ ಟ್ವೀಟ್ ಮಾಡಿದ್ದರು.

ಆದರೆ ಬೈಡನ್ ಅವರ ಟ್ವಿಟರ್ ಫಾಲೋವರ್ಸ್ ಅವರ ಮನವಿಯಂತೆ ದೇಣಿಗೆ ನೀಡಲು ಖಂಡಿತಾ ಮನಸ್ಸು ಮಾಡದೇ ಇದ್ದರೂ ಹಲವಾರು ಸಲಹೆಗಳನ್ನು ಮಾತ್ರ ನೀಡಿದ್ದಾರೆ.

"ನೀವು ರೂಮ್ ಮೇಟ್ ಹೊಂದುವ ಬಗ್ಗೆ, ಕಾಫಿ ಶಾಪ್ ನಲ್ಲಿ ಬೆಳಗ್ಗಿನ ಕಾಫಿ ತ್ಯಜಿಸುವ ಬಗ್ಗೆ, ಇನ್ನೊಂದು ಕೆಲಸ ಪಡೆಯುವ ಬಗ್ಗೆ ಹಾಗೂ ಹೀಟರ್ ಅನ್ನು ಇಡುವ ಬದಲು ಸ್ವೆಟರ್ ಹಾಕುವ ಬಗ್ಗೆ ಪರಿಗಣಿಸಿದ್ದೀರಾ?'' ಎಂದು ಒಬ್ಬರು ಬೈಡೆನ್ ಅವರಿಗೆ ಸಲಹೆ ನೀಡಿದ್ದಾರೆ.

"ನಿಮ್ಮ ಕುಟುಂಬದ ಜತೆ ಹೋಗಿ, ಈ ವರ್ಷ ಕೋಶೆಲ್ಲಾ ಹಬ್ಬಕ್ಕೆ ಹೋಗಬೇಡಿ, ನಿಮ್ಮ ಐಫೋನ್ ಅನ್ನು ಒಮ್ಮೆಗೇ ಅಪ್‍ಗ್ರೇಡ್ ಮಾಡಬೇಡಿ,'' ಎಂದು ಕಾಲಿನ್ ಬನ್ರ್ಸ್ ಎಂಬವರು ಟ್ವೀಟ್ ಮಾಡಿದ್ದಾರೆ.

"ನಿಮ್ಮ ಸಹಾಯ ವಾಸ್ತವವಾಗಿ ನಮಗೆ ಬೇಕಿದೆ,'' ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು- "ಇಲ್ಲ, ಈ ದೇಶದಲ್ಲಿ ಹಿಂದೆ ಸಾಕಷ್ಟು ಹಣವಿತ್ತು. ಊಟವಿಲ್ಲದೆ ಮೈಲುದ್ದ ಸರತಿ ನಿಲ್ಲುವ  ಜನರಿದ್ದಾರೆ ಹಾಗೂ ಅವರಿಗೆ ನಾವು ನೀಡುತ್ತಿಲ್ಲ, ಮತ್ತೆ  ಕೇಳಬೇಡಿ, ನೀವು ವಿಭನ್ನರಾಗಿರುತ್ತೀರಿ ಅಂದುಕೊಂಡಿದ್ದೆ,'' ಎಂದು ಬರೆದಿದ್ದಾರೆ.

"ತಮ್ಮ ಮೇಲೆಯೇ ದೌರ್ಜನ್ಯ ನಡೆಸುವ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ಮಿಲಿಯಗಟ್ಟಲೆ ನಿರುದ್ಯೋಗಿಗಳಿಂದ ದೇಣಿಗೆಗಳನ್ನು ಕೇಳುವುದನ್ನು ಊಹಿಸಬಲ್ಲಿರಾ,'' ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

"ಸಾಲ ಪಡೆಯಿರಿ, ಸಾಮಾನ್ಯ ಅಮೆರಿಕನ್ನರಿಗೆ ಅದು ಸಾಧ್ಯವಿಲ್ಲ,'' ಎಂದು ಇನ್ನೊಂದು ಪ್ರತಿಕ್ರಿಯೆ ಬಂದಿದೆ.

"ಇದು ಶ್ರೀಮಂತ ಜನರ ಸಮಸ್ಯೆಯೆಂಬಂತೆ ತೋರುತ್ತದೆ,'' ``ನಾವೇ ಕಷ್ಟದಲ್ಲಿದ್ದೇವೆ, ತಿಂಗಳುಗಟ್ಟಲೆ ನೌಕರಿಯಿಲ್ಲ, ಸಹಾಯವಿಲ್ಲ,'' ಎಂದು  ಇನ್ನೊಬ್ಬರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News