ತಾಲಿಬಾನ್, ಅಫ್ಘಾನ್ ಪ್ರತಿನಿಧಿಗಳ ಜೊತೆ ಪಾಂಪಿಯೊ ಶಾಂತಿ ಮಾತುಕತೆ

Update: 2020-11-22 17:31 GMT

ವಾಶಿಂಗ್ಟನ್,ನ.22: ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಯ ಯತ್ನವನ್ನು ಮುಂದುವರಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ರವಿವಾರ ಕತರ್ ರಾಜಧಾನಿ ದೋಹಾದಲ್ಲಿ ಅಫ್ಘಾನ್ ಸರಕಾರದ ಹಾಗೂ ತಾಲಿಬಾನ್ ಬಂಡುಕೋರರ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂಸಾಚಾರ ಉಲ್ಬಣಿಸಿರುವುದು ಆ ಯುದ್ಧಗ್ರಸ್ತ ರಾಷ್ಟ್ರದಲ್ಲಿ ಶಾಂತಿ ಪ್ರಕ್ರಿಯೆಗೆ ಧಕ್ಕೆಯುಂಟು ಮಾಡಲಿದೆಯೆಂಬ ಭೀತಿಯ ನಡುವೆಯ ಪಾಂಪಿಯೊ ಅಫ್ಘಾನ್ ಬಂಡುಕೋರರು ಮತ್ತು ಅಫ್ಘಾನ್ ಸರಕಾರದ ಜೊತೆಗೆ ಮಾತುಕತೆ ಪುನರಾರಂಭಿಸಿದ್ದಾರೆ.

 ತಾಲಿಬಾನ್ ಹಾಗೂ ಅಫ್ಘಾನ್ ಸರಕಾರದ ಪ್ರತಿನಿಧಿಗಳ ಜೊತೆ ತನ್ನ ಮಾತುಕತೆ ಉತ್ಸಾಹದಾಯಕವಾಗಿತ್ತೆಂದು ಪಾಂಪಿಯೊ ಶನಿವಾರ ಟ್ವೀಟ್ ಮಾಡಿದ್ದಾರೆ.

 ‘‘ ದೋಹಾದಲ್ಲಿ ತಾಲಿಬಾನ್ ಹಾಗೂ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ಸಂಧಾನ ತಂಡಗಳನ್ನು ಭೇಟಿಯಾಗಿದ್ದೇನೆ. ಇತ್ತಂಡಗಳು ಮಾತುಕತೆಯನ್ನು ಮುಂದುವರಿಸಿರುವುದನ್ನು ಹಾಗೂ ಮಾತುಕತೆಯಲ್ಲಿ ಪ್ರಗತಿ ಸಾಧಿಸಿರುವುದಕ್ಕಾಗಿ ನಾನು ಅವರನ್ನು ಪ್ರಶಂಸಿಸುತ್ತೇನೆ. ಅಫ್ಘಾನ್ ಬಿಕ್ಕಟ್ಟಿಗೆ ಸಂಬಂಧಿಸಿ ರಾಜಕೀಯ ಮಾರ್ಗನಕ್ಷೆ ರೂಪಿಸುವುದನ್ನು ಹಾಗೂ ಶಾಶ್ವತವಾದ ಹಾಗೂ ಸಮಗ್ರ ಕದನವಿರಾಮದ ಕುರಿತ ಮಾತುಕತೆಗಳನ್ನು ಮುಂದುವರಿಸುವುದನ್ನು ನಾನು ಉತ್ತೇಜಿಸುತ್ತೇನೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

 ಅಫ್ಘಾನಿಸ್ತಾನದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ಶಮನಗೊಳಿಸುವ ಕುರಿತಾದ ಮಾರ್ಗೋಪಾಯಗಳ ಬಗ್ಗೆ ಪಾಂಪಿಯೋ ಹಾಗೂ ಸಂಧಾನಕಾರರು ಚರ್ಚಿಸಿದರೆಂದು ಬ್ರೌನ್ ತಿಳಿಸಿದ್ದಾರೆ.

   ಪಾಂಪಿಯೋ ಅವರು ಶನಿವಾರ ತಾಲಿಬಾನ್‌ನ ರಾಜಕೀಯ ವ್ಯವಹಾರಗಳ ಉಪ ಮುಖ್ಯಸ್ಥ ಹಾಗೂ ರಾಜಕೀಯ ಕಾರ್ಯಾಲಯದ ವರಿಷ್ಠ ಮುಲ್ಲಾ ಬಿರಾದಾರ್ ಹ ಮತ್ತು ತಾಲಿಬಾನ್ ಸಂಧಾನ ತಂಡದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರೆಂದು ಅಮೆರಿಕದ ವಿದೇಶಾಂಗ ಇಲಾಖೆಯ ಉಪ ವಕ್ತಾರ ಕೇಲ್ ಬ್ರೌನ್ ಹೇಳಿದ್ದಾರೆ.

    40 ವರ್ಷಗಳ ದೀರ್ಘ ಸಮರ ಹಾಗೂ ರಕ್ತಪಾತದ ಬಳಿಕ ಅಫ್ಘಾನಿಸ್ತಾನದ ಜನತೆ ಶಾಂತಿ ಹಾಗೂ ಭದ್ರತೆಯೊಂದಿಗೆ ಬದುಕಲು ಬಯಸುತ್ತಿದ್ದಾರೆ ಪಾಂಪಿಯೊ ಹೇಳಿದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯವರು ಕತರ್‌ನ ವಿದೇಶಾಂಗ ಸಚಿವ ಅಲ್‌ತಾನಿ ಅವರನ್ನು ದೋಹಾದಲ್ಲಿ ಭೇಟಿಯಾಗಿ ದ್ವಿಪಕ್ಷೀಯ ಹಾಗೂ ಪ್ರಾಂತೀಯ ವಿಷಯಗಳ ಕುರಿತು ಚರ್ಚಿಸಿದರು.

 ಅಫ್ಘಾನ್ ಶಾಂತಿ ಮಾತುಕತೆಗಳಿಗೆ ಅತಿಥೇಯನಾಗಿ ಕತರ್ ಬೆಂಬಲ ನೀಡುತ್ತಿರುವುದನ್ನು ಅಮೆರಿಕವು ಶ್ಲಾಘಿಸುತ್ತದೆ. ಈ ಪ್ರದೇಶದಲ್ಲಿ ಇರಾನ್‌ನ ಕಳಂಕಿತ ಪ್ರಭಾವವನ್ನು ಎದುರಿಸಲು ಗಲ್ಫ್ ರಾಷ್ಟ್ರಗಳಲ್ಲಿ ಏಕತೆಯಿರುವುದು ನಿರ್ಣಾಯಕವಾದುದಾಗಿದೆ ಎಂದರು.

 ಪ್ರಸಕ್ತ ಅಫ್ಘಾನಿಸ್ತಾನದಲ್ಲಿ ನಿಯೋಜಿತರಾಗಿರುವ ಅಮೆರಿಕನ್ ಸೈನಿಕರ ಸಂಖ್ಯೆ 4500ಕ್ಕಿಂತಲೂ ಕಡಿಮೆ ಸಂಖ್ಯೆಗೆ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News