ಪೊಲೀಸರ ಚಿತ್ರ ಪ್ರಕಟಿಸುವುದನ್ನು ನಿಷೇಧಿಸುವ ವಿಧೇಯಕದ ವಿರುದ್ಧ ಫ್ರಾನ್ಸ್‌ನಲ್ಲಿ ವ್ಯಾಪಕ ಪ್ರತಿಭಟನೆ

Update: 2020-11-22 18:07 GMT

ಪ್ಯಾರಿಸ್,ನ.22: ಪೊಲೀಸ್ ಅಧಿಕಾರಿಗಳ ಮುಖಗಳ ಚಿತ್ರಗಳನ್ನು ಅನುಮತಿಯಿಲ್ಲದೆ ಪ್ರಸಾರ ಮಾಡುವುದು ಅಪರಾಧವೆಂದು ಪರಿಗಣಿಸುವ ವಿಧೇಯಕವನ್ನು ಫ್ರೆಂಚ್ ಸರಕಾರವು ಜಾರಿಗೊಳಿಸಲು ಹೊರಟಿರುವುದನ್ನು ವಿರೋಧಿಸಿ ಪ್ಯಾರಿಸ್‌ನಲ್ಲಿ ಶನಿವಾರ ಬೃಹತ್ ರ‍್ಯಾಲಿ ನಡೆಯಿತು.

 ಪೊಲೀಸ್ ಅಧಿಕಾರಿಗಳು ಹಾಗೂ ಅವರ ಕುಟುಂಬಗಳಿಗೆ ಕರ್ತವ್ಯದಲ್ಲಿ ಇರುವಾಗ ಅಥವಾ ಬಿಡುವಿನಲ್ಲಿದ್ದಾಗ ಅಥವಾ ಆನ್‌ಲೈನ್ ಮೂಲಕ ಅವರಿಗೆ ಕಿರುಕುಳ ನೀಡುವುದರ ವಿರುದ್ಧ ಈ ಕಾನೂನು ರಕ್ಷಣೆ ನೀಡುತ್ತದೆ ಎಂದು ವಿಧೇಯಕದ ಬೆಂಬಲಿಗರ ವಾದವಾಗಿದೆ.

  ಆದರೆ ವಿವಾದಾತ್ಮಕ ಕಾನೂನು ಪತ್ರಕರ್ತರ ವರದಿಗಾರಿಕೆಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಹಾಗೂ ಈ ವಿಧೇಯಕದಿಂದಾಗಿ ಅತಿಯಾದ ಬಲಪ್ರಯೋಗ ಹಾಗೂ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರನ್ನು ಉತ್ತರದಾಯಿಗಳನ್ನಾಗಿ ಮಾಡುವುದು ಕಷ್ಟಕರವಾಗಲಿದೆಯೆಂದು ವಿಧೇಯಕದ ವಿರೋಧಿಗಳು ಹೇಳುತ್ತಾರೆ. ಅನುಮತಿಯಿಲ್ಲದೆ ಪೊಲೀಸ್ ಅಧಿಕಾರಿಗಳ ಭಾವಚಿತ್ರವನ್ನು ಪ್ರಕಟಿಸಿದಲ್ಲಿ ಒಂದು ವರ್ಷ ಜೈಲು ಹಾಗೂ 45 ಸಾವಿರ ಯುರೋ ದಂಡವನ್ನು ವಿಧಿಸಲು ವಿಧೇಯಕವು ಅನುಮತಿ ನೀಡುತ್ತದೆ.

ನೂತನ ವಿಧೇಯಕವನ್ನು ವಿರೋಧಿಸಿ ಶನಿವಾರ ಪಶ್ಚಿಮ ಪ್ಯಾರಿಸ್‌ನ ಟೊಕಾರ್ಡೊ ಚೌಕದಲ್ಲಿ ಮಾನವಹಕ್ಕುಗಳ ಕಾರ್ಯಕರ್ತರು, ಕಾರ್ಮಿಕ ಒಕ್ಕೂಟಗಳ ಸದಸ್ಯರು ಹಾಗೂ ಪತ್ರಕರ್ತರು ಪ್ರತಿಭಟನಾ ರ‍್ಯಾಲಿಯನ್ನು ನಡೆಸಿದರು. ‘‘ ಪ್ರತಿಯೊಬ್ಬರು ಪೊಲೀಸರನ್ನು ಚಿತ್ರೀಕರಿಸಲು ಬಯಸುತ್ತಾರೆ’’ ಎಂಬ ಘೋಷಣೆಗಳನ್ನು ಅವರು ಕೂಗಿದರು.

ವಿಧೇಯಕದ ವಿರುದ್ಧ ಫ್ರಾನ್ಸ್‌ನ ಮಾರ್ಸಿಲೆ, ಲಿಲ್ಲೆ, ಮೊಂಟ್‌ಪೆಲ್ಲಿಯರ್, ರೆನ್ನೆಸ್ ಹಾಗೂ ಸೈಂಟ್ ಎಟಿನ್ನೆ ನಗರಗಳಲ್ಲಿಯೂ ರ‍್ಯಾಲಿಗಳು ನಡೆದಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News