×
Ad

ಶೈಕ್ಷಣಿಕ ಹೋರಾಟಗಾರ ಚೋಮ್‌ಸ್ಕಿ ವಿಚಾರಗೋಷ್ಠಿ ರದ್ದು: ಟಾಟಾ ಸಾಹಿತ್ಯೋತ್ಸವದ ಸಂಘಟಕರ ಸಮರ್ಥನೆ ಏನು?

Update: 2020-11-22 23:22 IST
ನೋಮ್ ಚೋಮ್‌ಸ್ಕಿ

ಹೊಸದಿಲ್ಲಿ,ನ.22: ಉತ್ಸವದ ಸಮಗ್ರತೆಯನ್ನು ರಕ್ಷಿಸಲು ಶೈಕ್ಷಣಿಕ ಹೋರಾಟಗಾರರಾದ ನೋಮ್ ಚೋಮ್‌ಸ್ಕಿ ಮತ್ತು ವಿಜಯ ಪ್ರಸಾದ್ ಅವರು ಪಾಲ್ಗೊಳ್ಳಬೇಕಿದ್ದ ಶುಕ್ರವಾರದ ವಿಚಾರಗೋಷ್ಠಿಯನ್ನು ರದ್ದುಗೊಳಿಸುವುದು ಅನಿವಾರ್ಯವಾಗಿತ್ತು ಎಂದು ಟಾಟಾ ಸಾಹಿತ್ಯ ಲೈವ್ ಉತ್ಸವದ ಸಂಘಟಕರು ಸಮರ್ಥಿಸಿಕೊಂಡಿದ್ದಾರೆ. ನಿಗದಿತ ವಿಚಾರ ಗೋಷ್ಠಿಯನ್ನು ದಿಢೀರ್‌ನೆ ರದ್ದುಗೊಳಿಸಿದ್ದಕ್ಕೆ ಚೋಮ್‌ಸ್ಕಿ ಮತ್ತು ಪ್ರಸಾದ್ ಶುಕ್ರವಾರ ರಾತ್ರಿ ವಿಷಾದವನ್ನು ವ್ಯಕ್ತಪಡಿಸಿದ್ದರು.

ಅರಿಝೊನ ವಿವಿಯಲ್ಲಿ ಬೋಧಕರಾಗಿರುವ ಚೋಮ್‌ಸ್ಕಿ ಅಮೆರಿಕದ ನೀತಿಗಳ ಕಟು ಟೀಕಾಕಾರರಾಗಿದ್ದಾರೆ. ಪ್ರಸಾದ್ ಅವರು ‘ಟ್ರೈಕಾಂಟಿನೆಂಟಲ್:ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ರೀಸರ್ಚ್ ’ನ ಕಾರ್ಯಕಾರಿ ನಿರ್ದೇಶಕರಾಗಿದ್ದು,ಎಡಪಂಥೀಯ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ವಿಚಾರಗೋಷ್ಠಿಯನ್ನೇರ್ಪಡಿಸುವ ನಿರ್ಧಾರ ತನ್ನದೇ ಆಗಿತ್ತು. ಪ್ರೊ.ನೋಮ್ ಚೋಮ್‌ ಸ್ಕಿ ಅವರ ಕಾರ್ಯಗಳನ್ನು ತಾನು ಬಹುವಾಗಿ ಗೌರವಿಸುತ್ತೇನೆ ಮತ್ತ ಮೆಚ್ಚುತ್ತೇನೆ. ಆದರೆ ಉತ್ಸವದ ಸಮಗ್ರತೆಯನ್ನು ಕಾಪಾಡಲು ಗೋಷ್ಠಿಯನ್ನು ರದ್ದುಗೊಳಿಸುವುದು ಅಗತ್ಯವಾಗಿತ್ತು ಎಂದು ಟಾಟಾ ಸಾಹಿತ್ಯೋತ್ಸವದ ಸ್ಥಾಪಕ ಮತ್ತು ನಿರ್ದೇಶಕ ಅನಿಲ್ ಧಾರ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ವಿಚಾರಗೋಷ್ಠಿ ನಡೆಯಲಿದ್ದ ದಿನ ಬೆಳಿಗ್ಗೆ ಚೋಮ್‌ಸ್ಕಿ, ಪ್ರಸಾದ್ ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿದ್ದ ಚರ್ಚೆಯನ್ನು ತಾನು ಗಮನಿಸಿದ್ದೆ. ಹೇಳಿಕೆಯೊಂದನ್ನು ನೀಡಲು ವಿಚಾರಗೋಷ್ಠಿಯನ್ನು ಬಳಸಿಕೊಳ್ಳಲು ಅವರು ಉದ್ದೇಶಿಸಿದ್ದರು ಎನ್ನುವುದು ತನಗೆ ಸ್ಪಷ್ಟವಾಗಿತ್ತು. ಟಾಟಾದಂತಹ ಕಾರ್ಪೊರೇಟ್ ಸಂಸ್ಥೆಗಳ,ನಿರ್ದಿಷ್ಟವಾಗಿ ಟಾಟಾಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವರು ಈ ವೇದಿಕೆಯನ್ನು ಬಳಸಲಿದ್ದರು. ಇದು ವಿಚಾರಗೋಷ್ಠಿಯ ಉದ್ದೇಶವೇ ಆಗಿರಲಿಲ್ಲ. ವಿಚಾರಗಳ ಮುಕ್ತ ಅಭಿವ್ಯಕ್ತಿಯು ಉತ್ಸವದ ಯಶಸ್ಸಿಗೆ ಕಾರಣವೇ ಹೊರತು ಯಾರದೋ ನಿರ್ದಿಷ್ಟ ಅಜೆಂಡಾದ ಮುಕ್ತ ಅಭಿವ್ಯಕ್ತಿಯಲ್ಲ. ನಿರ್ದಿಷ್ಟ ಸಂಸ್ಥೆ,ಕಂಪನಿ ಅಥವಾ ವ್ಯಕ್ತಿಯ ವಿರುದ್ಧ ಇಂತಹ ಅಜೆಂಡಾದ ಅಭಿವ್ಯಕ್ತಿಗೆ ಉತ್ಸವವು ವೇದಿಕೆಯಾಗುವುದಿಲ್ಲ ಎಂದು ಧಾರ್ಕರ್ ತಿಳಿಸಿದ್ದಾರೆ.

‘ನಮ್ಮ ವಿಚಾರ ಗೋಷ್ಠಿಯನ್ನೇಕೆ ರದ್ದು ಮಾಡಲಾಗಿದೆ ಎನ್ನುವುದು ನಮಗೆ ಗೊತ್ತಾಗಿಲ್ಲ. ಈ ಬಗ್ಗೆ ನಾವು ಕೇವಲ ಊಹೆ ಮಾಡಬಲ್ಲೆವು ಮತ್ತು ಇದು ಸೆನ್ಸಾರ್‌ಶಿಪ್ ಆಗಿದೆಯೇ ಎಂಬ ಸರಳ ಪ್ರಶ್ನೆಯನ್ನು ಕೇಳಬಹುದಷ್ಟೇ ಎಂದು ಚೋಮ್‌ಸ್ಕಿ ಮತ್ತು ಪ್ರಸಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News