ಅಂತರ್ ಧರ್ಮೀಯ ವಿವಾಹಕ್ಕೆ ನಿಯಮ ರೂಪಿಸಿದ ಕೇರಳ ಚರ್ಚ್

Update: 2020-11-23 04:48 GMT

ಇಡುಕ್ಕಿ, ನ.23: ಅಂತರ್ ಧರ್ಮೀಯ ವಿವಾಹ (ಡಿಸ್‌ಪ್ಯಾರಿಟಿ ಆಫ್ ಕಲ್ಟ್) ಸಂದರ್ಭದಲ್ಲಿ ಧರ್ಮಗುರುಗಳು ಕ್ಯಾನನ್ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸುವ ಮಾರ್ಗಸೂಚಿಗಳನ್ನು ಬಿಷಪ್‌ಗಳಿಗಾಗಿ ಸೈರೊ ಮಲಬಾರ್ ಚರ್ಚ್ ರೂಪಿಸಿದ್ದು, ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ಎರ್ನಾಕುಲಂನಲ್ಲಿ ಬಿಷಪ್ ಒಬ್ಬರು ನಿರ್ವಹಿಸಿದ ಅಂತರ್ ಧರ್ಮ ವಿವಾಹವು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಈ ನಿಯಮಾವಳಿ ರೂಪಿಸಲಾಗಿದೆ. ಕೆಥೊಲಿಕ್ ಮಹಿಳೆ ಮತ್ತು ಕೊಚ್ಚಿನ್ ಮೂಲದ ಮುಸ್ಲಿಂ ಯುವಕನ ವಿವಾಹ ನವೆಂಬರ್ 9ರಂದು ಕಡವಂತ್ರ ಜೋಸೆಫ್ ಚರ್ಚ್‌ನಲ್ಲಿ ನಡೆದಿತ್ತು.

ಸಾತ್ನಾದ ಮಾಜಿ ಬಿಷಪ್ ಮಾರ್ ಮ್ಯಾಥ್ಯೂ ವಣಿಯಕಿಳಕ್ಕಲ್ ಇದರಲ್ಲಿ ಭಾಗವಹಿಸಿದ್ದರು. ನೂತನ ದಂಪತಿ ಬಿಷಪ್ ಜತೆಗಿರುವ ಫೋಟೊ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಧರ್ಮನಿಷ್ಠರಿಂದ ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಾರ್ಡಿನಲ್ ಮಾರ್ ಜಾರ್ಜ್ ಅಲೆಂಚೇರಿಯವರು ಎರ್ನಾಕುಲಂ-ಅಂಗಮಾಲಿ ಧರ್ಮಪ್ರಾಂತದ ಆರ್ಚ್ ಬಿಷಪ್ ಮಾರ್ ಆಂತೋನಿ ಕರಿಯಾಲಿ ಅವರಿಗೆ ಆದೇಶಿಸಿದ್ದರು. ಕೇರಳ ಕೆಥೊಲಿಕ್ ಬಿಷಪ್‌ಗಳ ಮಂಡಳಿ (ಕೆಸಿಬಿಸಿ) ಹಿರಿಯ ಧರ್ಮಗುರುಗಳು, ಈ ವಿವಾಹ ಸಂದರ್ಭದಲ್ಲಿ ಕ್ಯಾನನ್ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಆಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News