'ಲವ್ ಜಿಹಾದ್' ಎನ್ನಲಾದ 14 ಪ್ರಕರಣಗಳ ಎಸ್‍ಐಟಿ ವರದಿ ಸಲ್ಲಿಕೆ: ಸಂಚಿನ ಆರೋಪ ತಳ್ಳಿ ಹಾಕಿದ ತನಿಖೆ

Update: 2020-11-24 07:07 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : 'ಲವ್ ಜಿಹಾದ್' ಎಂದು ಆಪಾದಿಸಲಾದ ಪ್ರಕರಣಗಳ ಕುರಿತು ತನಿಖೆ ನಡೆಸಲು ಸೆಪ್ಟೆಂಬರ್ ತಿಂಗಳಲ್ಲಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡ (ಸಿಟ್) ತಾನು ತನಿಖೆ ನಡೆಸಿದ ಇಂತಹ 14 ಪ್ರಕರಣಗಳಲ್ಲಿ ಯಾವುದೇ ಸಂಚಿನ ಸಾಧ್ಯತೆಯನ್ನು ತಳ್ಳಿ ಹಾಕಿದೆ. ಈ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಮುಸ್ಲಿಂ ಯುವಕರು ವಿದೇಶಗಳಿಂದ ಹಣ ಪಡೆದಿದ್ದಾರೆಂಬುದಕ್ಕೆ ಯಾವುದೇ ಸಾಕ್ಷ್ಯಾಧಾರವೂ ತನಿಖಾ ತಂಡಕ್ಕೆ ದೊರಕಿಲ್ಲ. ಸೋಮವಾರ ತನ್ನ ತನಿಖಾ ವರದಿಯನ್ನು ಸಲ್ಲಿಸಿದ  ವಿಶೇಷ ತನಿಖಾ ತಂಡ  ಈ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಯುವಕರಿಗೆ ಯಾವುದೇ ಸಂಘಟನೆಯ ಬೆಂಬಲಯಿದೆಯೆನ್ನುವ ಆರೋಪಗಳನ್ನೂ ತಳ್ಳಿ ಹಾಕಿದೆ.

ಉತ್ತರ ಪ್ರದೇಶದಲ್ಲಿ 'ಕಾನೂನುಬಾಹಿರ ಮತಾಂತರಗಳನ್ನು'  ತಡೆಯಲು ಅಧ್ಯಾದೇಶ ಹೊರಡಿಸುವುದಾಗಿ ಉತ್ತರ  ಪ್ರದೇಶ ಸರಕಾರ ಹೇಳಿದ ಎರಡು ದಿನಗಳ ನಂತರ ಈ ವರದಿ ಸಲ್ಲಿಕೆಯಾಗಿದೆ. ಉತ್ತರ ಪ್ರದೇಶ ಸರಕಾರದ ಹೇಳಿಕೆ 'ಲವ್ ಜಿಹಾದ್' ಎಂದು ಆರೋಪಿಸಲಾದ ಪ್ರಕರಣಗಳನ್ನು ಗುರಿಯಾಗಿಸಿತ್ತು.

ಮುಸ್ಲಿಂ ಯುವಕರು ಹಿಂದು ಯುವತಿಯರನ್ನು ಮತಾಂತರಗೊಳಿಸುವ ಉದ್ದೇಶದಿಂದ ಅವರನ್ನು ವಿವಾಹವಾಗುತ್ತಿದ್ದಾರೆ ಎಂದು ವಿಹಿಂಪ ಸಹಿತ ಕೆಲ ಸಂಘ ಪರಿವಾರ ಸಂಘಟನೆಗಳು ದೂರಿದ ನಂತರ ಐಜಿ (ಕಾನ್ಪುರ್ ವಲಯ) ಮೋಹಿತ್ ಅಗರ್ವಾಲ್ ವಿಶೇಷ ತನಿಖಾ ತಂಡ ರಚಿಸಿದ್ದರು. ಡಿವೈಎಸ್ಪಿ ವಿಕಾಸ್ ಪಾಂಡೆ ನೇತೃತ್ವದ ಸಿಟ್ ಸೋಮವಾರ ಅಗರ್ವಾಲ್ ಅವರಿಗೆ ವರದಿ ಸಲ್ಲಿಸಿದೆ. ಕಾನ್ಪುರ್ ಜಿಲ್ಲೆಯಲ್ಲಿ ನಡೆದಿದೆಯೆನ್ನಲಾದ 14 'ಲವ್ ಜಿಹಾದ್' ಪ್ರಕರಣಗಳ ಕುರಿತು ತನಿಖೆ ನಡೆಸಲಾಗಿತ್ತು.

ಈ ಕುರಿತು ಮಾಹಿತಿ ನೀಡಿದ ಅಗರ್ವಾಲ್ 14 ಪ್ರಕರಣಗಳ ಪೈಕಿ 11ರಲ್ಲಿ ಪೊಲೀಸರು ಸೆಕ್ಷನ್ 363 ಹಾಗೂ 366 ಮತ್ತಿತರ ಸೆಕ್ಷನ್‍ಗಳನ್ವಯ ಅಪಹರಣ, ಬಲವಂತದ ಮದುವೆ ಮುಂತಾದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದರು ಹಾಗೂ ಒಂಬತ್ತು ಪ್ರಕರಣಗಳಲ್ಲಿ ಸಂತ್ರಸ್ತೆಯರು  ಅಪ್ರಾಪ್ತೆಯರಾಗಿದ್ದರು ಎಂದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ಒಟ್ಟು 14 ಪ್ರಕರಣಗಳ ಪೈಕಿ ಮೂರರಲ್ಲಿ  ಹಿಂದು ಮಹಿಳೆಯರು 18 ವರ್ಷ ಮೇಲ್ಪಟ್ಟವರು ಎಂದು ತಿಳಿದ ನಂತರ ಪೊಲೀಸರು ಪ್ರಕರಣ ಮುಚ್ಚಿದ್ದರು. ಈ ಪ್ರಕರಣದಲ್ಲಿ ಯುವತಿಯರು ತಾವು ಸ್ವಪ್ರೇರಣೆಯಿಂದ ಮುಸ್ಲಿಂ ಯುವಕರನ್ನು ವಿವಾಹವಾಗಿರುವುದಾಗಿ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News