ಯುವರಾಜ, ನೆತನ್ಯಾಹು ನಡುವೆ ಮಾತುಕತೆ ನಡೆದಿಲ್ಲ: ಸೌದಿ ಅರೇಬಿಯ

Update: 2020-11-24 17:30 GMT

ರಿಯಾದ್ (ಸೌದಿ ಅರೇಬಿಯ), ನ. 24: ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ್ದ ವೇಳೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮಾತುಕತೆ ನಡೆಸಿದ್ದರು ಎಂಬ ಇಸ್ರೇಲ್ ಮಾಧ್ಯಮಗಳ ವರದಿಯನ್ನು ಸೌದಿ ಅರೇಬಿಯ ಸೋಮವಾರ ನಿರಾಕರಿಸಿದೆ.

‘‘ಇತ್ತೀಚೆಗೆ ಮೈಕ್ ಪಾಂಪಿಯೊ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ್ದ ವೇಳೆ, ಯುವರಾಜ ಮತ್ತು ಇಸ್ರೇಲ್ ಅಧಿಕಾರಿಗಳ ನಡುವೆ ಮಾತುಕತೆ ನಡೆಯಿತು ಎಂಬ ಕುರಿತ ಪತ್ರಿಕಾ ವರದಿಗಳನ್ನು ನಾನು ನೋಡಿದ್ದೇನೆ’’ ಎಂಬುದಾಗಿ ಸೌದಿ ಅರೇಬಿಯದ ವಿದೇಶ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಟ್ವೀಟ್ ಮಾಡಿದ್ದಾರೆ.

‘‘ಇಂಥ ಯಾವುದೇ ಸಭೆ ನಡೆದಿಲ್ಲ. ಆ ಸಭೆಯಲ್ಲಿ ಉಪಸ್ಥಿತರಿದ್ದವರು ಅಮೆರಿಕ ಮತ್ತು ಸೌದಿ ಅರೇಬಿಯದ ಅಧಿಕಾರಿಗಳು ಮಾತ್ರ’’ ಎಂದು ಅವರು ಹೇಳಿದ್ದಾರೆ.

ಈ ಮಾತುಕತೆ ರವಿವಾರ ನಡೆಯಿತು ಎಂಬುದಾಗಿ ಇಸ್ರೇಲ್‌ನ ಸರಕಾರಿ ಟಿವಿ ಕಾನ್ ಮತ್ತು ಇತರ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.

ಸೌದಿ ಅರೇಬಿಯದ ಮಿತ್ರ ದೇಶಗಳಾದ ಯುಎಇ ಮತ್ತು ಬಹರೈನ್ ಈಗಾಗಲೇ ಇಸ್ರೇಲ್ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News