ರದ್ದುಗೊಳಿಸಲಾದ ರೋಶ್ನಿ ಕಾಯ್ದೆ ಅಡಿಯಲ್ಲಿ ಭೂಮಿ ಪಡೆದುಕೊಂಡ 130 ಜನರ ಪಟ್ಟಿಯಲ್ಲಿ ಫಾರೂಕ್ ಅಬ್ದುಲ್ಲಾ ಸಹೋದರಿ

Update: 2020-11-25 17:23 GMT

ಶ್ರೀನಗರ, ನ. 25: ರದ್ದುಪಡಿಸಲಾದ ರೋಶ್ನಿ ಕಾಯ್ದೆ ಅಡಿಯಲ್ಲಿ ಭೂಮಿ ಪಡೆದುಕೊಂಡ 130 ಜನರ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕ ಸೇರಿದಂತೆ ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಸಹೋದರಿ ಹಾಗೂ ಇಬ್ಬರು ಪ್ರಮುಖ ಹೊಟೇಲ್ ಉದ್ಯಮಿಗಳು ಸೇರಿದ್ದಾರೆ. ಕಾಶ್ಮೀರದ ವಿಭಾಗೀಯ ಆಯುಕ್ತರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಹೊಸ ಪಟ್ಟಿಯಲ್ಲಿ ಮಾಜಿ ಅಧಿಕಾರಿ ಹಾಗೂ ಅವರ ಪತ್ನಿ ಸೇರಿದಂತೆ ಹೆಚ್ಚಿನ ಫಲಾನುಭವಿಗಳು ಈ ಯೋಜನೆ ಅಡಿಯಲ್ಲಿ ತಮ್ಮ ವಸತಿ ಪ್ರದೇಶಗಳನ್ನು ಕಾನೂನುಬದ್ಧಗೊಳಿಸಿದ್ದಾರೆ. ತಮ್ಮ ವಾಣಿಜ್ಯ ಕಟ್ಟಡಗಳ ಮಾಲಕತ್ವ ಪಡೆದ 12 ಉದ್ಯಮಿಗಳ ಹೆಸರು ಕೂಡ ಈ ಪಟ್ಟಿಯಲ್ಲಿ ಇವೆ.

ರೋಶ್ನಿ ಕಾಯ್ದೆ ಕಾನೂನುಬಾಹಿರ, ಅಸಂವಿಧಾನಿಕ ಹಾಗೂ ಸುಸ್ಥಿರ ಅಲ್ಲ ಎಂದು ಘೋಷಿಸಿ ಹಾಗೂ ಈ ಕಾಯ್ದೆ ಅಡಿಯಲ್ಲಿ ಭೂಮಿ ಮುಂಜೂರು ಮಾಡಿರುವ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿ ಜಮ್ಮು ಹಾಗೂ ಕಾಶ್ಮೀರ ಉಚ್ಚ ನ್ಯಾಯಾಲಯ ಅಕ್ಟೋಬರ್ 9ರಂದು ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿ ವಿಭಾಗೀಯ ಆಡಳಿತ ಫಲಾನುಭವಿಗಳ ಈ ಎರಡನೇ ಪಟ್ಟಿಯನ್ನು ಅಪ್‌ಲೋಡ್ ಮಾಡಿದೆ. ಮಾಜಿ ಹಣಕಾಸು ಸಚಿವ ಹಸೀಬ್ ದ್ರಾಬು, ಅವರ ಕೆಲವರು ಸಂಬಂಧಿಕರು, ಉನ್ನತ ಮಟ್ಟದ ಹೊಟೇಲ್ ಉದ್ಯಮಿಗಳು ಹಾಗೂ ಮಾಜಿ ಅಧಿಕಾರಿಗಳನ್ನು ಒಳಗೊಂಡ 35 ಮಂದಿ ಫಲಾನುಭವಿಗಳ ಪಟ್ಟಿಯನ್ನು ಆಡಳಿತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.

ಈ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕ ಕೆ.ಕೆ. ಆಮ್ಲಾ ಹಾಗೂ ಮುಸ್ತಾಖ್ ಅಹ್ಮದ್ ಚಾಯಾ (ಇಬ್ಬರೂ ಪ್ರಮುಖ ಉದ್ಯಮಿ ಹಾಗೂ ಹೊಟೇಲ್ ಉದ್ಯಮಿಗಳು), ಮಾಜಿ ಅಧಿಕಾರಿ ಮುಹಮ್ಮದ್ ಶಫಿ ಪಂಡಿತ್ ಹಾಗೂ ಅವರ ಪತ್ನಿ, ಫಾರೂಕ್ ಅಬ್ದುಲ್ಲಾ ಅವರ ಸಹೋದರಿ ಸುರಿಯಾ ಅಬ್ದುಲ್ಲಾ ಅವರು ವಸತಿ ಬಳಕೆಯ ಅಡಿಯಲ್ಲಿ ನಿವೇಶನಗಳ ಮಾಲಕತ್ವ ಪಡೆದುಕೊಂಡ ಫಲಾನುಭವಿಗಳಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News