ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್ ಫ್ಲಿನ್‌ಗೆ ಟ್ರಂಪ್ ಕ್ಷಮೆ

Update: 2020-11-26 17:14 GMT

ವಾಶಿಂಗ್ಟನ್, ನ. 26: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ)ಗೆ ಸುಳ್ಳು ಹೇಳಿರುವುದನ್ನು ಒಪ್ಪಿಕೊಂಡಿರುವ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್ ಫ್ಲಿನ್‌ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಕ್ಷಮಾದಾನ ನೀಡಿದ್ದಾರೆ.

 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದ ಎಫ್‌ಬಿಐಗೆ ಸುಳ್ಳು ಹೇಳಿರುವುದನ್ನು ಫ್ಲಿನ್ ಒಪ್ಪಿಕೊಂಡಿದ್ದರು.

‘‘ಜನರಲ್ ಮೈಕಲ್ ಟಿ. ಫ್ಲಿನ್‌ಗೆ ಸಂಪೂರ್ಣ ಕ್ಷಮಾದಾನ ನೀಡಲಾಗಿದೆ ಎಂದು ಘೋಷಿಸಲು ನಾನು ಹೆಮ್ಮೆ ಪಡುತ್ತೇನೆ. ಜನರಲ್ ಫ್ಲಿನ್ ಮತ್ತು ಅವರ ಅದ್ಭುತ ಕುಟುಂಬ ಸದಸ್ಯರನ್ನು ನಾನು ಅಭಿನಂದಿಸುತ್ತೇನೆ. ಈಗ ನೀವು ನೆಮ್ಮದಿಯಾಗಿ ‘ಥ್ಯಾಂಕ್ಸ್‌ಗಿವಿಂಗ್’ ಆಚರಣೆಯಲ್ಲಿ ಭಾಗವಹಿಸಬಹುದು ಎಂದು ನಾನು ಭಾವಿಸುತ್ತೇನೆ’’ ಎಂಬುದಾಗಿ ಟ್ರಂಪ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

2017ರಲ್ಲಿ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮೊದಲು, ರಶ್ಯದ ಅಮೆರಿಕ ರಾಯಭಾರಿಯೊಂದಿಗೆ ತಾನು ನಡೆಸಿದ ರಹಸ್ಯ ಮಾತುಕತೆಯ ಬಗ್ಗೆ ಎಫ್‌ಬಿಐಗೆ ಸುಳ್ಳು ಹೇಳಿರುವುದನ್ನು ಫ್ಲಿನ್ ಬಳಿಕ ಒಪ್ಪಿಕೊಂಡಿದ್ದರು.

ಬಳಿಕ ಅವರು ತನ್ನ ತಪ್ಪೊಪ್ಪಿಗೆ ಹೇಳಿಕೆಯನ್ನು ಹಿಂದಕ್ಕೆ ಪಡೆಯಲು ಪ್ರಯತ್ನಿಸಿದ್ದಾರೆ. ಪ್ರಾಸಿಕ್ಯೂಟರ್‌ಗಳು ನನ್ನ ಹಕ್ಕನ್ನು ಉಲ್ಲಂಘಿಸಿದ್ದಾರೆ ಹಾಗೂ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡುವಂತೆ ನನ್ನನ್ನು ವಂಚಿಸಲಾಗಿದೆ ಎಂದು ಅವರು ವಾದಿಸಿದ್ದಾರೆ.

ಅವರಿಗೆ ಶಿಕ್ಷೆ ನೀಡುವ ಕಲಾಪವನ್ನು ಹಲವು ಬಾರಿ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News