​ಭಾರತದ ಐಟಿ ಕ್ಷೇತ್ರದ ಪಿತಾಮಹ ಫಕೀರ್ ‌ಚಂದ್ ಕೊಹ್ಲಿ ನಿಧನ

Update: 2020-11-27 03:46 GMT

ಮುಂಬೈ : ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪಿತಾಮಹ ಎಂದೇ ಕರೆಸಿಕೊಂಡಿದ್ದ ಫಕೀರ್ ‌ಚಂದ್ ಕೊಹ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಭಾರತದ ಅಗ್ರಗಣ್ಯ ಐಟಿ ಸಂಸ್ಥೆಗಳಲ್ಲೊಂದಾದ ಟಿಸಿಎಸ್ ಸಂಸ್ಥೆಯನ್ನು ಆರಂಭಿಸುವಲ್ಲಿ ಇವರು ಮಹತ್ವದ ಪಾತ್ರ ವಹಿಸುವ ಮೂಲಕ ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮದ ಬೀಜ ಬಿತ್ತಿದ್ದರು. ಅಮೆರಿಕದ ಎಂಐಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಕೊಹ್ಲಿ 1951ರಲ್ಲಿ ಟಾಟಾ ಎಲೆಕ್ಟ್ರಿಕ್ (ಇದೀಗ ಟಾಟಾ ಪವರ್) ಸೇರಿದ್ದರು. ಮುಂಬೈ ಮತ್ತು ಪುಣೆ ನಡುವಿನ ವಿದ್ಯುತ್ ‌ಲೈನ್ ನಿಯಂತ್ರಿಸುವ ಕಂಪ್ಯೂಟರ್ ಸಿಸ್ಟಮ್ ಅಭಿವೃದ್ಧಿಪಡಿಸಿದ ತಂಡದ ಭಾಗವಾಗಿದ್ದರು. ಇದರೊಂದಿಗೆ ಟಾಟಾ ಎಲೆಕ್ಟ್ರಿಕ್, ಕಂಪ್ಯೂಟರ್ ಅಳವಡಿಸಿಕೊಂಡ ಮೂರನೇ ಸಂಸ್ಥೆಯಾಗಿ ಹೊರಹೊಮ್ಮಿತ್ತು.

1968ರಲ್ಲಿ ಜೆಆರ್‌ಡಿ ಟಾಟಾ ಅವರು ಎಫ್.ಸಿ.ಕೊಹ್ಲಿಯವರನ್ನು ಟಿಸಿಎಸ್ ಎಂಬ ಸ್ಟಾರ್ಟ್‌ಅಪ್ ಕಂಪನಿ ಆರಂಭಿಸಲು ಆಯ್ಕೆ ಮಾಡಿಕೊಂಡರು. ವ್ಯವಸ್ಥಾಪನೆ ಸಲಹಾ ಕಂಪನಿಯಾಗಿ ಆರಂಭವಾದ ಟಿಸಿಎಸ್ ಬಳಿಕ ಕೊಹ್ಲಿಯವರ ದೂರದೃಷ್ಟಿಯ ಕಾರಣದಿಂದ ಸಾಫ್ಟ್‌ವೇರ್ ಅಭಿವೃದ್ಧಿ ಕ್ಷೇತ್ರದ ಪ್ರಮುಖ ಕಂಪನಿಯಾಗಿ ಮುಂದಿನ ಎರಡು ದಶಕಗಳಲ್ಲಿ ಬೆಳೆಯಿತು.

"ಕೊಹ್ಲಿ ಅವರು ಆರಂಭಿಕ ವರ್ಷಗಳಲ್ಲಿ ಟಿಸಿಎಸ್ ಮುನ್ನಡೆಗೆ ಮಾರ್ಗದರ್ಶನ ಮಾಡಿದ್ದರು. ಅದರ ಪ್ರಗತಿಯ ದೂರದೃಷ್ಟಿಯನ್ನು ವ್ಯಾಖ್ಯಾನಿಸಿದ್ದರು. ಈ ಆರಂಭಿಕ ದೂರದೃಷ್ಟಿ, ಟಿಸಿಎಸ್ ಕಂಪನಿಯನ್ನು ಜಾಗತಿಕ ಐಟಿ ಕ್ಷೇತ್ರದ ದಿಗ್ಗಜ ಕಂಪನಿಯಾಗಿ ರೂಪುಗೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿತು" ಎಂದು ಟಾಟಾ ಟ್ರಸ್ಟ್ ಅಧ್ಯಕ್ಷ ರತನ್ ಟಾಟಾ ಬಣ್ಣಿಸಿದ್ದಾರೆ.

ಟಿಸಿಎಸ್ ಇಂದು ವಿಶ್ವದ ಮೂರನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿದ್ದು, ಟಾಟಾ ಸಮೂಹದ ಕಿರೀಟ ಎನಿಸಿಕೊಂಡಿದೆ. ಟಾಟಾ ಸಮೂಹದ ಒಟ್ಟು ಲಾಭದ ಶೇಕಡ 70ರಷ್ಟು ಲಾಭ ಈ ಕಂಪನಿಯಿಂದ ಬರುತ್ತಿದೆ. 1999ರಲ್ಲಿ ತಮ್ಮ 75ನೇ ವಯಸ್ಸಿನಲ್ಲಿ ಅವರು ಟಿಸಿಎಸ್‌ನಿಂದ ನಿವೃತ್ತಿ ಪಡೆದಿದ್ದರು.

"ನನ್ನನ್ನು ಟ್ರೈನಿ ಆಗಿ ಟಿಸಿಎಸ್ ನೇಮಕ ಮಾಡಿಕೊಂಡ ದಿನದಿಂದ ಕೊಹ್ಲಿಯವರ ಜತೆ ಕೆಲಸ ಮಾಡುವ, ಅವರಿಂದ ಕಲಿತುಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು" ಎಂದು ಟಿಸಿಎಸ್‌ನ ಮಾಜಿ ಸಿಇಒ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಹೇಳಿದ್ದಾರೆ. ಐಟಿ ವಲಯದಲ್ಲಿ ಎಫ್‌ಸಿಕೆ ಎಂದೇ ಖ್ಯಾತರಾಗಿದ್ದ ಕೊಹ್ಲಿ, ಟಿಸಿಎಸ್‌ಗೆ ಅಡಿಗಲ್ಲು ಹಾಕಿದ್ದು ಮಾತ್ರವಲ್ಲದೇ ಭಾರತದಲ್ಲಿ 190 ಶತಕೋಟಿ ಡಾಲರ್ ಮೌಲ್ಯದ ಸಾಫ್ಟ್‌ವೇರ್ ಸೇವಾ ವಲಯ ಬೆಳೆಯಲು ಮುನ್ನುಡಿ ಬರೆದಿದ್ದರು.

"ಕೊಹ್ಲಿ ಭಾರತದ ಐಟಿ ಕ್ಷೇತ್ರದ ನಿಜವಾದ ಪಿತಾಮಹ. ಅವರ ಹೆಜ್ಜೆಗುರುತನ್ನು ನಾವೆಲ್ಲರೂ ಅನುಸರಿಸಿದ್ದೇವೆ. ಐಟಿ ಉದ್ಯಮಕ್ಕೆ ಮತ್ತು ದೇಶಕ್ಕೆ ಅವರ ಕೊಡುಗೆ ಅಮೂಲ್ಯ" ಎಂದು ವಿಪ್ರೊ ಸ್ಥಾಪಕಾಧ್ಯಕ್ಷ ಅಜೀಂ ಪ್ರೇಮ್‌ಜಿ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News