ಅಬ್ ಕೀ ಬಾರ್ ಬೈಡನ್ ಸರಕಾರ್

Update: 2020-11-27 19:30 GMT

‘‘ಪ್ರಪಂಚದಲ್ಲಿ ನಾವು ಹುಡುಕುವ ಶಾಂತಿ ಮಾನವರ ಹೃದಯಗಳಲ್ಲಿ ಆರಂಭವಾಗುತ್ತದೆ. ಧರ್ಮ ಅಥವಾ ಜನಾಂಗದಲ್ಲಿರುವ ಯಾವುದೇ ವ್ಯತ್ಯಾಸವನ್ನು ಮೀರಿ ದೃಷ್ಟಿ ಹಾಯಿಸಿದಾಗ ಅದು ದಿವ್ಯವಾಗಿ ಪ್ರತಿಯೊಬ್ಬರ ಆತ್ಮದ ಸೌಂದರ್ಯದಲ್ಲಿ ವ್ಯಕ್ತಗೊಳ್ಳುತ್ತದೆ. ಇದು ಬೇರೆಲ್ಲೆಡೆಗಿಂತ ಭಾರತದಲ್ಲಿ ಅತ್ಯಂತ ಮುಖ್ಯವಾಗಿದೆ.’’ 2015ರ ಜನವರಿ 27ರಂದು ಭಾರತಕ್ಕೆ ಭೇಟಿ ನೀಡಿದಾಗ ಸಿರಿಫೋರ್ಟ್ ಆಡಿಟೋರಿಯಂನಲ್ಲಿ ಮಾಡಿದ ತನ್ನ ಭಾಷಣದಲ್ಲಿ ಬರಾಕ್ ಒಬಾಮಾ ಹೇಳಿದ ಮಾತುಗಳಿವು.

ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿ ಆಗಷ್ಟೇ 8 ತಿಂಗಳುಗಳು ಕಳೆದಿದ್ದು ಮತ್ತು ಆಗ ತಾನೇ ‘ಹಿಂದುತ್ವ’ದ ನಗಾರಿ ಆರಂಭವಾಗಿತ್ತು. ಕ್ರಿಶ್ಚಿಯನ್ನರನ್ನು ಮತ್ತು ಮುಸ್ಲಿಮರನ್ನು ಮರಳಿ ಹಿಂದೂ ಧರ್ಮಕ್ಕೆ ತರುವ ‘ಫರ್ ವಾಪ್ಸಿ’ ಕಾರ್ಯಕ್ರಮಗಳು ನಡೆಯಲಾರಂಭಿಸಿದವು.
ಈ ವರ್ಷ ಫೆಬ್ರವರಿ 24-25ರಂದು ಒಬಾಮಾರವರ ಉತ್ತರಾಧಿಕಾರಿ ಡೊನಾಲ್ಡ್ ಟ್ರಂಪ್ ಹೊಸದಿಲ್ಲಿಗೆ ಭೇಟಿ ನೀಡುವ ವೇಳೆಗೆ ಮೋದಿಯವರ ‘ಹೊಸ ಭಾರತ’ಕ್ಕೆ ಸುಮಾರು 6 ವರ್ಷಗಳಾಗಿತ್ತು. ಹೈದರಾಬಾದ್ ಹೌಸ್‌ನಲ್ಲಿ ಮೋದಿ ಮತ್ತು ಟ್ರಂಪ್ ಭೇಟಿಯಾದ ದಿನ ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುವವರ ಹಾಗೂ ವಿರೋಧಿಸುವವರ ನಡುವೆ ದೇಶದ ರಾಜಧಾನಿಯ ಇನ್ನೊಂದು ಭಾಗದಲ್ಲಿ ಒಂದು ಹಿಂಸಾತ್ಮಕ ಘರ್ಷಣೆ ನಡೆಯಿತು. ಆ ಕುರಿತು ಅಂದು ಸಂಜೆ ಪತ್ರಿಕಾಗೋಷ್ಠಿಯೊಂದರಲ್ಲಿ ‘‘ಮೋದಿ ಜೊತೆ ಆ ವಿಷಯವನ್ನು ಪ್ರಸ್ತಾಪಿಸಿದಿರೇ?’’ ಎಂದು ಟ್ರಂಪ್ ಅವರನ್ನು ಕೇಳಲಾಯಿತು ಆಗ ಟ್ರಂಪ್ ಹೇಳಿದರು: ‘‘ಆ ಹಿಂಸಾತ್ಮಕ ಘಟನೆಯ ಬಗ್ಗೆ ನನಗೆ ತಿಳಿಯಿತು. ಆದರೆ ಆ ಬಗ್ಗೆ ಅವರೊಡನೆ ನಾನು ಚರ್ಚಿಸಲಿಲ್ಲ. ಅದು ಭಾರತಕ್ಕೆ ಸಂಬಂಧಿಸಿದ ವಿಚಾರ.’’

 ಆವತ್ತು ಟ್ರಂಪ್ ಹೇಳಿದ ಮಾತು ಮತ್ತು ಒಬಾಮಾ ನೀಡಿದ ಸಂದೇಶ ನಡುವೆ ಇರುವ ವೈರುಧ್ಯ ಸ್ಪಷ್ಟವಿದೆ. ಟ್ರಂಪ್ ಆಡಿದ ಮಾತು ಪ್ರಧಾನಿ ಮೋದಿಯವರ ಕಿವಿಗಳಿಗೆ ಖಂಡಿತವಾಗಿಯೂ ಸಂಗೀತವಾಗಿತ್ತು. ಆದರೆ ಟ್ರಂಪ್ ಆಡಿದ ಇತರ ಹಲವು ಮಾತುಗಳು, ಮಾಡಿದ ಕೆಲಸಗಳು ಸಂಪೂರ್ಣವಾಗಿ ಮಧುರ ಸಂಗೀತವಾಗಿರಲಿಲ್ಲ. ನಿಜ ಹೇಳಬೇಕೆಂದರೆ ಟ್ರಂಪ್ ಭಾರತ ಮತ್ತು ಮೋದಿಯ ಬಗ್ಗೆ ಹಲವು ರಾಜತಾಂತ್ರಿಕವಲ್ಲದ ಮಾತುಗಳನ್ನು ಹೇಳಿ ಮೋದಿ, ಅವರ ಸರಕಾರವು ಇರಿಸುಮುರಿಸು ಆಗುವಂತೆ ಮಾಡಿದರು. ಹಾರ್ಲೆ ಡೇವಿಡ್ಸನ್ ಮೋಟರ್ ಸೈಕಲ್‌ಗಳ ವಿಷಯದಲ್ಲಿ ಅವರು ಮೋದಿಯವರನ್ನು ಗೇಲಿ ಮಾಡಿದ್ದಷ್ಟೇ ಅಲ್ಲದೆ ಅಫ್ಘಾನಿಸ್ತಾನದ ಹಲವು ಅಭಿವೃದ್ಧಿ ಯೋಜನೆಗಳಿಗೆ ಭಾರತ ನೀಡಿದ ಬೆಂಬಲದ ಬಗ್ಗೆ ತುಂಬ ಹಗುರವಾಗಿ ಮಾತಾಡಿದರು.

ಕಾಶ್ಮೀರ ವಿಷಯದಲ್ಲಿ ಭಾರತ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಬೇಕೆಂದು ಪ್ರಧಾನಿ ಮೋದಿಯವರು ತನ್ನೊಡನೆ ವಿನಂತಿಸಿಕೊಂಡಿದ್ದರೆಂದು ಕೂಡ ಟ್ರಂಪ್ ಹೇಳಿದ್ದರು. ಭಾರತ ಇದನ್ನು ಅಲ್ಲಗಳೆದ ಮೇಲೆ ಕೂಡ ಅವರು ಹೀಗೆ ಹೇಳುತ್ತಲೇ ಇದ್ದರು.

‘ಹೌಡಿ ಮೋದಿ’ ಮತ್ತು ಆ ಬಳಿಕದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮಗಳಲ್ಲಿ ಈ ಇಬ್ಬರು ನಾಯಕರು ತಮ್ಮ ಗೆಳೆತನವನ್ನು ಮೆರೆದರು. ಆದರೆ ಎಪ್ರಿಲ್‌ನಲ್ಲಿ ಮೋದಿ ಸರಕಾರ ಅಮೆರಿಕಕ್ಕೆ ಎಚ್‌ಸಿಕ್ಯೂ ಔಷಧಿಯ ರಫ್ತಿಗೆ ಒಪ್ಪಿಗೆ ನೀಡದಿದ್ದಲ್ಲಿ ತಾನು ಭಾರತದ ವಿರುದ್ಧ ಪ್ರತೀಕಾರ ಮಾಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದರು. ಮೋದಿಯವರೊಂದಿಗಿನ ಗೆಳೆತನ ಅಮೆರಿಕದ ಚುನಾವಣೆಯಲ್ಲಿ ತನಗೆ ಅಮೆರಿಕದ ಭಾರತೀಯ ಸಮುದಾಯದ ಬೆಂಬಲ ಸಿಗುವಂತೆ ಮಾಡಿತೆಂದು ಕೂಡ ಅವರು ಸೂಚ್ಯವಾಗಿ ಹೇಳಿದರು. ಆದರೆ ಜೋ ಬೈಡನ್‌ರ ಜೊತೆ ನಡೆಸಿದ ಅಧ್ಯಕ್ಷೀಯ ಚರ್ಚೆಯಲ್ಲಿ ಮೋದಿ ಸರಕಾರ ಭಾರತದ ಕೋವಿಡ್-19 ಹಾಗೂ ಅದರಿಂದ ಸಂಭವಿಸಿದ ಸಾವುಗಳ ನಿಜವಾದ ಸಂಖ್ಯೆಗಳನ್ನು ಹೇಳುತ್ತಿಲ್ಲ ಎಂದು ದೂರಿ, ‘‘ಭಾರತದ ವಾಯು ಕೊಳಕಾಗಿದೆ’’ ಎಂದು ಹೇಳಿ ಅವರು ವಿವಾದಕ್ಕೊಳಗಾದರು.

 ಟ್ರಂಪ್ ಜನವರಿ 2017ರಲ್ಲಿ ಅಧಿಕಾರ ವಹಿಸಿಕೊಂಡಾಗ ಅವರು ಪಾಕಿಸ್ತಾನದ ಹಾಗೂ ಭಯೋತ್ಪಾದನೆ ವಿರುದ್ಧ ತನ್ನ ಆವೇಶದ ಮಾತುಗಳನ್ನು ಕಾರ್ಯಗತಗೊಳಿಸುತ್ತಾರೆ ಎಂದು ಬಿಜೆಪಿ ಹಾಗೂ ಮೋದಿ ಸರಕಾರ ಬಹಳ ಭರವಸೆ ಇಟ್ಟುಕೊಂಡಿತ್ತು. ಆದರೆ ಆ ಭರವಸೆ ಈಡೇರಲಿಲ್ಲ. ಟ್ರಂಪ್ ಆಡಳಿತ ಪಾಕಿಸ್ತಾನಕ್ಕೆ 1.3 ಬಿಲಿಯನ್‌ಡಾಲರ್‌ನಷ್ಟು ಭದ್ರತಾ ನೆರವನ್ನು ಕಡಿತಗೊಳಿಸಿತ್ತಾದರೂ, ಕೆಲವೇ ತಿಂಗಳಲ್ಲಿ ಟ್ರಂಪ್ ತನ್ನ ಹಾದಿ ಬದಲಿಸಿದರು. ಅಫ್ಘಾನಿಸ್ತಾನದಿಂದ ಅಮೆರಿಕನ್ ಸೇನೆ ಹಿಂದೆಗೆಯಲು ತಾಲಿಬಾನ್ ಜೊತೆ ನಡೆಸಿದ ಸಂವಾದಕ್ಕೆ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರವರ ನೆರವು ಯಾಚಿಸಿದರು. ಇರಾನ್ ವಿರುದ್ಧದ ನಿಷೇಧವನ್ನು ಹೇರುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕದ ಸಂಬಂಧ ಒತ್ತಡಕ್ಕೀಡಾಯಿತು.

ಕಳೆದ 4 ವರ್ಷಗಳಲ್ಲಿ ಅಮೆರಿಕದ ವ್ಯಾಪಾರ ನೀತಿ ಹಾಗೂ ಕ್ರಿಯೆಗಳು ಮತ್ತು ಟ್ರಂಪ್ ಅವರ ವಲಸೆ ನೀತಿಗಳು ಉಭಯ ದೇಶಗಳ ಸಂಬಂಧಕ್ಕೆ ದೊಡ್ಡ ತೊಡಕಾದವು.

ಬೈಡನ್-ಹ್ಯಾರಿಸ್ ಸರಕಾರ ಕೂಡ ಅಫ್ಘಾನಿಸ್ತಾನದ ಮೇಲೆ ಕಣ್ಣಿಟ್ಟು ಪಾಕಿಸ್ತಾನದ ಜೊತೆ ಹಾರ್ದಿಕ ಸಂಬಂಧಕ್ಕಾಗಿ ಹಾತೊರೆಯದಿರುವುದಿಲ್ಲ. ಬೈಡನ್‌ರವರು ಕಾಶ್ಮೀರ ಹಾಗೂ ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಈ ವರ್ಷದ ಆರಂಭದಲ್ಲಿ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಮಾನವಹಕ್ಕುಗಳ ವಿಷಯದಲ್ಲಿ ಮೋದಿಯವರ ಸಹಕಾರಕ್ಕೆ ಟ್ರಂಪ್‌ರಿಂದ ಸಿಕ್ಕಿದಂತಹ ಫ್ರೀ ಪಾಸ್ ಬೈಡನ್-ಹ್ಯಾರಿಸ್ ಆಡಳಿತದಿಂದ ದೊರಕುವ ಸಾಧ್ಯತೆ ಖಂಡಿತವಾಗಿಯೂ ಇರಲಾರದು. ಆದರೂ ಭಾರತ ಅಮೆರಿಕ ನಡುವಣ ಆಯಕಟ್ಟಿನ ಮುಖ್ಯ ಸಂಬಂಧಗಳಲ್ಲಿ ಈ ವಿಷಯಗಳು ಒಂದು ತೊಡಕಾಗದಂತೆ ಉಭಯ ದೇಶಗಳು ಹೆಜ್ಜೆ ಇಡುವ ಸಾಧ್ಯತೆ ಇದ್ದೇ ಇದೆ.

ಕೃಪೆ: deccanherald 

Writer - ಅನಿರ್ಬನ್ ಭೌಮಿಕ್

contributor

Editor - ಅನಿರ್ಬನ್ ಭೌಮಿಕ್

contributor

Similar News