ಬೈಡನ್ ವಿಜಯ ಅಧಿಕೃತವಾಗಿ ಖಚಿತಗೊಂಡರೆ ನಾನು ಶ್ವೇತಭವನದಿಂದ ನಿರ್ಗಮಿಸುವೆ: ಟ್ರಂಪ್

Update: 2020-11-27 18:03 GMT

ವಾಶಿಂಗ್ಟನ್. ನ. 27: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಚುನಾವಣೆಯಲ್ಲಿ ಗೆದ್ದಿದ್ದಾರೆ ಎನ್ನುವುದು ಅಧಿಕೃತವಾಗಿ ಖಚಿತಗೊಂಡರೆ ನಾನು ಶ್ವೇತಭವನದಿಂದ ನಿರ್ಗಮಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಗುರುವಾರ ಹೇಳಿದ್ದಾರೆ.

 ಚುನಾವಣಾ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸುವ ಮೂಲಕ ಚುನಾವಣಾ ಫಲಿತಾಂಶವನ್ನು ಧಿಕ್ಕರಿಸುವ ಅಭೂತಪೂರ್ವ ಪ್ರಯತ್ನಗಳನ್ನು ಟ್ರಂಪ್ ಈವರೆಗೆ ಮಾಡಿಕೊಂಡು ಬಂದಿದ್ದಾರೆ. ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಅವ್ಯವಹಾರ ನಡೆಸಿದೆ ಎಂಬ ಆರೋಪಗಳನ್ನು ಮಾಡುತ್ತಾ ಬಂದಿರುವ ಅವರು, ನ್ಯಾಯಾಲಯಗಳಲ್ಲಿ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಹಲವು ಮೊಕದ್ದಮೆಗಳನ್ನು ಹೂಡಿದ್ದಾರೆ. ಆದರೆ, ನ್ಯಾಯಾಲಯಗಳು ಈ ಮೊಕದ್ದಮೆಗಳನ್ನು ಒಂದೊಂದಾಗಿ ತಿರಸ್ಕರಿಸಿವೆ.

ನಾನು ಒಂದು ಅವಧಿಗೆ ಮಾತ್ರ ಅಧ್ಯಕ್ಷನಾಗಿರುತ್ತೇನೆ ಎಂದು ನವೆಂಬರ್ 3ರ ಚುನಾವಣೆಯ ಬಳಿಕ, ವರದಿಗಾರರ ಮೊದಲ ಪ್ರಶ್ನೆಗಳಿಗೆ ಉತ್ತರಿಸುತ್ತಾ ಟ್ರಂಪ್ ಹೇಳಿದರು.

ಇಲೆಕ್ಟೋರಲ್ ಕಾಲೇಜ್ ಬೈಡನ್‌ರ ವಿಜಯವನ್ನು ಖಚಿತಪಡಿಸಿದರೆ ನೀವು ಶ್ವೇತಭವನವನ್ನು ತೊರೆಯುವಿರಾ ಎಂಬ ಪ್ರಶ್ನೆಗೆ, ‘‘ಖಂಡಿತ, ನಾನು ಶ್ವೇತಭವನವನ್ನು ತೊರೆಯುವೆ. ಅದು ನಿಮಗೂ ಗೊತ್ತು’’ ಎಂದು ಟ್ರಂಪ್ ಉತ್ತರಿಸಿದರು.

‘‘ಆದರೆ, ಅವರು (ಇಲೆಕ್ಟೋರಲ್ ಕಾಲೇಜ್) ಆ ರೀತಿಯ ನಿರ್ಧಾರವನ್ನು ತೆಗೆದುಕೊಂಡರೆ ಅವರು ಮಾಡುತ್ತಿರುವುದು ತಪ್ಪು. ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ’’ ಎಂದು ಅವರು ಹೇಳಿದರು.

ಅಧ್ಯಕ್ಷೀಯ ಚುನಾವಣೆಯ ವಿಜಯಿಯನ್ನು ನಿರ್ಧರಿಸುವ ಇಲೆಕ್ಟೋರಲ್ ಕಾಲೇಜ್ ಡಿಸೆಂಬರ್ 14ರಂದು ಸಭೆ ಸೇರಲಿದೆ. ಬೈಡನ್ 306 ಇಲೆಕ್ಟೋರಲ್ ಮತಗಳನ್ನು ಪಡೆದಿದ್ದು, ಟ್ರಂಪ್ 232 ಮತಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News