ಪ್ರೆಸ್ ಕೌನ್ಸಿಲ್ ಸಲಹಾ ಪತ್ರ ಹಿಂಪಡೆಯಲು ಎಡಿಟರ್ಸ್ ಗಿಲ್ಡ್ ಆಗ್ರಹ

Update: 2020-11-28 15:58 GMT

ಹೊಸದಿಲ್ಲಿ, ನ.28: ವಿದೇಶಿ ವಿಷಯಗಳ ಅನಿಯಂತ್ರಿತ ಪ್ರಸಾರದ ವಿರುದ್ಧ ಮಾಧ್ಯಮ ಸಂಸ್ಥೆಗಳಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ(ಪಿಸಿಐ) ರವಾನಿಸಿರುವ ಸಲಹಾ ಪತ್ರವನ್ನು ತಕ್ಷಣ ಹಿಂಪಡೆಯುವಂತೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಆಗ್ರಹಿಸಿದೆ. ಪಿಸಿಐ ನವೆಂಬರ್ 25ರಂದು ಹೊರಡಿಸಿರುವ ಸಲಹಾಪತ್ರದಿಂದ ಗೊಂದಲ ಮೂಡಿದೆ. ಆದ್ದರಿಂದ ತಕ್ಷಣ ಸಲಹಾಪತ್ರ ಹಿಂಪಡೆಯಬೇಕು ಎಂದು ಎಡಿಟರ್ಸ್ ಗಿಲ್ಡ್ ಒತ್ತಾಯಿಸಿದೆ.

ವಿದೇಶಿ ವಿಷಯಗಳನ್ನು ಪ್ರಕಟಿಸುವಾಗ ಭಾರತೀಯ ಪತ್ರಿಕೆಗಳ ಹೊಣೆಗಾರಿಕೆ ಬಗ್ಗೆ ಸರಕಾರದಿಂದ ಪ್ರಸ್ತಾಪ ಬಂದಿದೆ. ವಿದೇಶಿ ವಿಷಯಗಳ ಅನಿಯಂತ್ರಿಕ ಪ್ರಸಾರ ಅಪೇಕ್ಷಣೀಯವಲ್ಲ. ಆದ್ದರಿಂದ ಸರಿಯಾಗಿ ಪರಿಶೀಲಿಸಿದ ಬಳಿಕವೇ ವಿದೇಶಿ ವಿಷಯಗಳ ಸಾರವನ್ನು ಪ್ರಕಟಿಸಬೇಕು ಎಂದು ನವೆಂಬರ್ 25ರಂದು ರವಾನಿಸಿದ ಸಲಹಾ ಪತ್ರದಲ್ಲಿ ಪಿಸಿಐ ಸೂಚಿಸಿತ್ತು. ‘ ವಿಷಯಗಳನ್ನು ಪ್ರಕಟಿಸುವ ಸಂಸ್ಥೆಗಳ ವಿರುದ್ಧ ಕೆಲವು ರೀತಿಯ ಸೆನ್ಸಾರ್‌ಶಿಪ್ ಮತ್ತು ದಂಡನಾರ್ಹ ಕ್ರಮಗಳನ್ನು ತರುವ ನಿಟ್ಟಿನಲ್ಲಿ ಪಿಸಿಐ ಇರಿಸಿದ ಹೆಜ್ಜೆ ಇದಾಗಿದ್ದು ಈ ಸಲಹಾಪತ್ರ ಅಪೇಕ್ಷಣೀಯವಲ್ಲ. ‘ಅನಿಯಂತ್ರಿಕ ಪ್ರಸಾರ’ ಎಂದರೆ ಏನು?, ವಿಷಯಗಳನ್ನು ಯಾರು ಪರಿಶೀಲಿಸಬೇಕು, ವಿಷಯಗಳ ಪರಿಶೀಲನೆಗೆ ಮಾನದಂಡವೇನು ಎಂಬ ಬಗ್ಗೆ ಸಲಹಾಪತ್ರದಲ್ಲಿ ಉಲ್ಲೇಖವಿಲ್ಲ ’ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.

‘ದೇಶದ ಅನೇಕ ಸುದ್ಧಿಸಂಸ್ಥೆಗಳು ವಿದೇಶದ ಏಜೆನ್ಸಿಗಳು, ಸುದ್ಧಿಪತ್ರಿಕೆಗಳು ಮತ್ತು ನಿಯತಕಾಲಿಕಗಳ ಅನುಮತಿ ಪಡೆದು ಸುದ್ದಿಯನ್ನು ಮರುರೂಪಿಸುತ್ತವೆ. ಇದು ಸಂಪಾದಕರ ವಿಶೇಷಾಧಿಕಾರವಾಗಿದೆ ಮತ್ತು ತಮ್ಮ ಪ್ರಕಾಶನದಲ್ಲಿ ಪ್ರಕಟವಾದ ಎಲ್ಲಾ ವಿಷಯಗಳಿಗೂ ಅವರೇ ಜವಾಬ್ದಾರರಾಗಿರುತ್ತಾರೆ. ಈ ಸ್ಥಾಪಿತ ಪ್ರಕ್ರಿಯೆಯ ಬಗ್ಗೆ ಪ್ರೆಸ್‌ ಕೌನ್ಸಿಲ್‌ನ ಸಲಹೆ ಗೊಂದಲವನ್ನು ಮೂಡಿಸುತ್ತಿದೆ’ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News