ಮುಂಬೈ ದಾಳಿ ಸೂತ್ರಧಾರಿಯ ಮಾಹಿತಿ ನೀಡಿದವರಿಗೆ 37 ಕೋಟಿ ರೂ.: ಅಮೆರಿಕ ಘೋಷಣೆ

Update: 2020-11-28 16:50 GMT

ವಾಶಿಂಗ್ಟನ್, ನ. 28: ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದ 12 ವರ್ಷಗಳ ಬಳಿಕ, ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದನೆನ್ನಲಾದ ಲಷ್ಕರೆ ತಯ್ಯಬ ಭಯೋತ್ಪಾದಕ ಗುಂಪಿನ ಸದಸ್ಯ ಸಾಜಿದ್ ಮಿರ್‌ನ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ 50 ಲಕ್ಷ ಡಾಲರ್ (ಸುಮಾರು 37 ಕೋಟಿ ರೂಪಾಯಿ) ಬಹುಮಾನ ನೀಡುವುದಾಗಿ ಅವೆುರಿಕ ಘೋಷಿಸಿದೆ.

2008 ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 166 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

‘‘ಪಾಕಿಸ್ತಾನದಲ್ಲಿರುವ ವಿದೇಶಿ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಬದ ಹಿರಿಯ ಸದಸ್ಯ ಸಾಜಿದ್ ಮಿರ್, ಮುಂಬೈ ಮೇಲೆ 2008 ನವೆಂಬರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ ವಿಚಾರಣೆಗೆ ಬೇಕಾಗಿದ್ದಾನೆ. ಯಾವುದೇ ದೇಶದಲ್ಲಿ ಸಾಜಿದ್ ಮಿರ್‌ನ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ 50 ಲಕ್ಷ ಡಾಲರ್‌ವರೆಗಿನ ಬಹುಮಾನವನ್ನು ಘೋಷಿಸಲಾಗಿದೆ’’ ಎಂದು ಅವೆುರಿಕದ ಕಾನೂನು ಇಲಾಖೆಯು ‘ನ್ಯಾಯಕ್ಕಾಗಿ ಬಹುಮಾನ’ ಕಾರ್ಯಕ್ರಮದಡಿಯಲ್ಲಿ ಹೊರಡಿಸಿದ ಹೇಳಿಕೆಯೊಂದು ತಿಳಿಸಿದೆ.

‘‘ಸಾಜಿದ್ ಮಿರ್ ಲಷ್ಕರೆ ತಯ್ಯಬದ ಮುಂಬೈ ದಾಳಿಯ ಕಾರ್ಯಾಚರಣಾ ನಿರ್ವಾಹಕನಾಗಿದ್ದನು. ಭಯೋತ್ಪಾದಕ ದಾಳಿಯ ಯೋಜನೆ, ಸಿದ್ಧತೆ ಮತ್ತು ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸಿದ್ದನು. ಅಮೆರಿಕದ ಜಿಲ್ಲಾ ನ್ಯಾಯಾಲಯದಲ್ಲಿ ಅವನ ವಿರುದ್ಧ 2011 ಎಪ್ರಿಲ್ 21ರಂದು ದೋಷಾರೋಪ ಪಟ್ಟಿ ದಾಖಲಾಗಿದೆ. ವಿದೇಶಿ ಸರಕಾರವೊಂದರ ಸೊತ್ತುಗಳಿಗೆ ಹಾನಿಮಾಡಲು ಸಂಚು ನಡೆಸಿದ, ಭಯೋತ್ಪಾದಕರಿಗೆ ವಸ್ತು ರೂಪದಲ್ಲಿ ಬೆಂಬಲ ಒದಗಿಸಿದ, ಅಮೆರಿಕದ ಹೊರಗಡೆ ಅಮೆರಿಕ ಪ್ರಜೆಯನ್ನು ಕೊಂದ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸಿದ ಆರೋಪಗಳನ್ನು ಅವನ ವಿರುದ್ಧ ಹೊರಿಸಲಾಗಿದೆ’’ ಎಂದು ಕಾನೂನು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News