ಕೃಷಿ ವಿವಿಗಳು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು: ಸಚಿವ ಬಿ.ಸಿ.ಪಾಟೀಲ್

Update: 2020-11-28 16:52 GMT

ಬೆಂಗಳೂರು, ನ. 28: ರಾಜ್ಯದ ಕೃಷಿ ವಿಶ್ವ ವಿದ್ಯಾಲಯಗಳು ಗ್ರಾಮಗಳನ್ನು ದತ್ತು ಪಡೆಯಬೇಕು. ಆ ಮೂಲಕ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕಾರಣವಾಗಬೇಕು. ಇದು ಅತ್ಯಂತ ಅಗತ್ಯ ಮತ್ತು ಜರೂರಿನ ಕಾರ್ಯವೂ ಹೌದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಇಂದಿಲ್ಲಿ ಕರೆ ನೀಡಿದ್ದಾರೆ.

ಶನಿವಾರ ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯದ 54ನೆ ಘಟಿಕೋತ್ಸವದಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು, ಪಿಎಚ್‍ಡಿ ಪಡೆದವರಿಗೆ ಪದವಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು ಆರು ಕೃಷಿ ವಿಶ್ವ ವಿದ್ಯಾಲಯಗಳಿವೆ. ಇವುಗಳು ಪ್ರತಿವರ್ಷ ತಲಾ ನಾಲ್ಕು ಹಳ್ಳಿಗಳನ್ನು ದತ್ತು ಪಡೆದುಕೊಂಡು ಅಲ್ಲಿಯ ಕೃಷಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಮಾದರಿ ಗ್ರಾಮಗಳನ್ನಾಗಿ ಮಾಡಬೇಕಿದೆ ಎಂದು ಸಲಹೆ ಮಾಡಿದರು.

ಇಪ್ಪತ್ತು ವರ್ಷಗಳಿಂದ ರಾಜ್ಯದ ಕೃಷಿ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿಯಾಗಿರಲಿಲ್ಲ. ಆದರೆ, ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದರ ಬಗ್ಗೆ ಆಸಕ್ತಿ ವಹಿಸಿದೆ. ಅದು ಇತ್ತೀಚೆಗೆ ತಿದ್ದುಪಡಿಯಾಗಿದೆ. ಆಹಾರ ಮತ್ತು ಕೃಷಿ ಇಂಜಿನಿಯರಿಂಗ್ ವಿಷಯಗಳಲ್ಲಿ ಪದವಿ ಪಡೆದವರಿಗೆ ಶೇ.15ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಅವರು ವಿವರಿಸಿದರು.

ಪದವಿ, ಅತಿಹೆಚ್ಚು ಚಿನ್ನದ ಪದಕಗಳನ್ನು ಪಡೆದವರಲ್ಲಿ ವಿದ್ಯಾರ್ಥಿನಿಯರೇ ಅಧಿಕವಾಗಿದ್ದಾರೆ. ಇದು ಸಂತೋಷದ ಸಂಗತಿ. ಆದರೆ, ಉದ್ಯಮಿಗಳಾದವರು, ಸರಕಾರಿ  ಉದ್ಯೋಗಿಗಳಾದವರ ಸಂಖ್ಯೆ ಗಮನಿಸಿದರೆ ಮಹಿಳೆಯರು ಕಡಿಮೆ ಇದ್ದಾರೆ. ಕೃಷಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಕೃಷಿ ನವೋದ್ಯಮಿಗಳಾಗಿ ಹೊರಹೊಮ್ಮಬೇಕು. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಈ ಮಾದರಿಯಲ್ಲಿ ಇಂಥ ವಿದ್ಯಾರ್ಥಿನಿಯರ ಜೀವನಪಥ ಮುಂದುವರಿಯಲು ಕೃಷಿ ವಿಶ್ವ ವಿದ್ಯಾಲಯ ಆಸಕ್ತಿ ವಹಿಸಬೇಕು ಎಂದು ಪಾಟೀಲ್ ಸೂಚಿಸಿದರು.

ನಿಮ್ಮ ಜ್ಞಾನ ಕೃಷಿಕರ ಏಳ್ಗೆಗೆ ಬಳಕೆಯಾಗಲಿ: ಪದವಿ ಪಡೆದ ನಿಮ್ಮೆಲ್ಲರ ಸಾಧನೆ ಚಿನ್ನದ ಪದಕಗಳನ್ನು ತೆಗೆದುಕೊಳ್ಳುವುದಕ್ಕಷ್ಟೇ ಸೀಮಿತವಾಗಬಾರದು. ನಿಮ್ಮ ಜ್ಞಾನ ಕೃಷಿಕರ ಏಳಿಗೆಗೆ ಸದುಪಯೋಗವಾಗಬೇಕು. ನೀವು ಸಾಧನೆ ಮಾಡಬೇಕಿರುವುದು ಬಹಳಷ್ಟಿದೆ. ನೊಂದ ರೈತರ ಕಣ್ಣೀರು ಒರೆಸುವ ಕಾರ್ಯವನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಭಾರತೀಯ ರೈತರದು ಮಳೆಯೊಂದಿಗಿನ ಜೂಜಿನ ಬದುಕು. ಮಳೆ ಅತಿಯಾದರೂ ಕಷ್ಟ ತೀರಾ ಕಡಿಮೆಯಾದರೂ ಕಷ್ಟ. ಚಂಡಮಾರುತಗಳಿಂದಲೂ ಸಂಕಷ್ಟಕ್ಕೆ ಸಿಲುಕುತ್ತಾರೆ.ಇಂತಹ ಕೃಷಿಕರ ಏಳಿಗೆಗೆ ಕಾರಣವಾಗುವ ಕಾರ್ಯಗಳನ್ನು ನೀವೆಲ್ಲರೂ ಮಾಡಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಸ್ವಾಗತ ಕೋರಿ ಶೈಕ್ಷಣಿಕ ವರದಿ ಮಂಡಿಸಿದರು. ಕುಲಸಚಿವರು ಸಾಂಪ್ರದಾಯಿಕ ಘಟಿಕೋತ್ಸವ ನಡವಳಿ ನೇತೃತ್ವವನ್ನು ವಹಿಸಿದ್ದರು. ಪದವೀಧರರು ನೇರವಾಗಿ ಮತ್ತು ಆನ್‍ಲೈನ್ ಮೂಲಕವೂ ಭಾಗವಹಿಸಿದ್ದರು. ಸಮಾರಂಭದಲ್ಲಿ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News