ಕೊರೋನ ವೈರಸ್ ಮೂಲ ವುಹಾನ್ ಅಲ್ಲ: ಚೀನಾ ವಾದ

Update: 2020-11-28 17:23 GMT

ಬೀಜಿಂಗ್ (ಚೀನಾ), ನ. 28: ಕೋವಿಡ್-19 ಸೋಂಕು ಪ್ರಕರಣಗಳು ಮೊದಲು ವುಹಾನ್ ನಗರದಲ್ಲಿ ವರದಿಯಾದವು ಎಂದ ಮಾತ್ರಕ್ಕೆ ವೈರಸ್ ಅಲ್ಲೇ ಹುಟ್ಟಿಕೊಂಡಿತು ಎಂದರ್ಥವಲ್ಲ ಎಂಬುದಾಗಿ ಚೀನಾ ಶುಕ್ರವಾರ ತನ್ನ ಹೊಸ ವಾದವನ್ನು ಮಂಡಿಸಿದೆ.

ವೈರಸ್‌ನ ಮೂಲವನ್ನು ಪತ್ತೆಹಚ್ಚುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ ತಂಡವೊಂದು ಚೀನಾಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅದು ಈ ಹೇಳಿಕೆ ನೀಡಿದೆ.

ವೈರಸ್ ವುಹಾನ್‌ನಲ್ಲಿ ಹುಟ್ಟಿಕೊಂಡಿತು ಎಂಬ ವಾದವನ್ನು ನಿರಾಕರಿಸುವ ಸರಣಿ ವರದಿಗಳನ್ನು ಚೀನಾದ ಸರಕಾರಿ ಮಾಧ್ಯಮಗಳು ಹಲವು ದಿನಗಳಿಂದ ಪ್ರಸಾರಿಸುತ್ತಿವೆ. ಭಾರತ ಸೇರಿದಂತೆ ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಹಲವಾರು ಆಹಾರ ಉತ್ಪನ್ನಗಳಲ್ಲಿ ಕೋವಿಡ್-19 ವೈರಸ್ ಪತ್ತೆಯಾಗಿವೆ ಎಂದು ಹೇಳಿರುವ ಸರಕಾರಿ ಮಾಧ್ಯಮಗಳು, ವೈರಸ್ ವಿದೇಶಗಳಿಂದ ಚೀನಾವನ್ನು ಪ್ರವೇಶಿಸಿರಬಹುದು ಎಂದಿದೆ.

ಚೀನಾದ ಅಧಿಕೃತ ನಿಲುವು ಕೂಡಾ ಇದಾಗಿದೆಯೇ ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚೀನಾ, ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್, ‘‘ಕೊರೋನ ವೈರಸ್ ಸಾಂಕ್ರಾಮಿಕವನ್ನು ಮೊದಲು ವರದಿ ಮಾಡಿದ್ದು ಚೀನಾವಾದರೂ, ವೈರಸ್ ಹುಟ್ಟಿಕೊಂಡಿದ್ದು ಚೀನಾದಲ್ಲೇ ಎಂದು ಖಚಿತವಾಗಿ ಹೇಳುವಂತಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News