ದಿಲ್ಲಿಯಲ್ಲಿ ರೈತರೇಕೆ ಪ್ರತಿಭಟಿಸಬಾರದು: ಬಿಜೆಪಿ ನಾಯಕನ ಪ್ರಶ್ನೆ

Update: 2020-11-29 08:09 GMT

 ಹೊಸದಿಲ್ಲಿ: ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುವ ಹಕ್ಕು ರೈತರಿಗೆ ಇದೆ ಎಂದು ಪಂಜಾಬ್‌ನಲ್ಲಿ ರೈತರೊಂದಿಗೆ ಮಾತುಕತೆ ನಡೆಸಲು ರಚಿಸಲಾಗಿರುವ 8 ಸದಸ್ಯರ ಸಮಿತಿಯ ಅಧ್ಯಕ್ಷರಾಗಿರುವ ಸುರ್ಜಿತ್ ಕುಮಾರ್ ಜಯಾನಿ ಹೇಳಿದ್ದಾರೆ.

ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಣ್ಣಾ ಹಝಾರೆ ಹಾಗೂ ಬಾಬಾ ರಾಮ್ ದೇವ್ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿಯನ್ನು ನಡೆಸಬಹುದಾದರೆ, ರೈತರು ಏಕೆ ಅಲ್ಲಿ ರ್ಯಾಲಿಗಳನ್ನು ನಡೆಸಬಾರದು. ಇದು ಪ್ರಜಾಪ್ರಭುತ್ವ. ಪ್ರತಿಯೊಬ್ಬರಿಗೂ ಮಾತನಾಡಲು ಹಕ್ಕಿದೆ ಎಂದು ಮಾಜಿ ಸಂಪುಟ ಸಚಿವ ಜಯಾನಿ ಹೇಳಿದ್ದಾರೆ.

ಹರ್ಯಾಣ ಸರಕಾರವು ತಡೆಗೋಡೆಯನ್ನು ನಿರ್ಮಿಸಿ, ರೈತರ ಮೇಲೆ ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿರುವುದನ್ನು ಖಂಡಿಸಿರುವ ಜಯಾನಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರೊಂದಿಗೆ ನಡೆದುಕೊಳ್ಳುವ ಸರಿಯಾದ ರೀತಿ ಇದಲ್ಲ. ಅವರೆಲ್ಲರೂ ರೈತರು. ದಿಲ್ಲಿಯಲ್ಲಿ ರಚಿಸಲಾಗಿರುವ ಕೃಷಿ ಮಸೂದೆಗಳ ಕುರಿತು ಕೇಳಲು ಬಯಸಿದ್ದಾರೆ. ಹೀಗಾಗಿ ಅವರನ್ನು ದಿಲ್ಲಿಗೆ ಹೋಗಲು ಅವಕಾಶ ನೀಡಬೇಕಾಗಿತ್ತು. ರೈತರನ್ನು ತಡೆಯಲು ಏನೆಲ್ಲಾ ಮಾಡಿದ್ದಾರೋ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ರೈತರನ್ನು ಸೀದಾ ದಿಲ್ಲಿಗೆ ಕಳುಹಿಸಿಕೊಟ್ಟು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕಾಗಿತ್ತು ಎಂದರು.

  ರೈತರೊಂದಿಗೆ ಪೊಲೀಸರು ಸ್ನೇಹದಿಂದ ವರ್ತಿಸಲು ಯತ್ನಿಸಬೇಕೆಂದು ಸೂಚಿಸುವಂತೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್‌ರೊಂದಿಗೆ ಮಾತನಾಡಿದ್ದೇನೆ. ರೈತರು ದೇಶದ ಅನ್ನದಾತರು. ಅವರು ನಮಗೆಲ್ಲರಿಗೂ ಆಹಾರ ನೀಡುತ್ತಾರೆ. ಅವರಿಗೆ ದಿಲ್ಲಿಗೆ ತೆರಳಲು ಮುಕ್ತ ಅವಕಾಶ ನೀಡಬೇಕು. ಈಗ ಪೊಲೀಸರು ರೈತರೊಂದಿಗೆ ಸಂಯಮದಿಂದ ನಡೆದುಕೊಳ್ಳುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News