ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಲು ರೈತರ ನಿರಾಕರಣೆ

Update: 2020-11-29 17:02 GMT

ಹೊಸದಿಲ್ಲಿ, ನ.29: ಗೊತ್ತುಪಡಿಸಿದ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಬೇಕು ಎಂಬ ಪೂರ್ವ ಷರತ್ತಿನೊಂದಿಗೆ ಕೇಂದ್ರ ಸರಕಾರ ರೈತರ ಮುಂದಿರಿಸಿದ ಮಾತುಕತೆಯ ಪ್ರಸ್ತಾವವನ್ನು ರೈತರು ತಿರಸ್ಕರಿಸಿದ್ದು ದಿಲ್ಲಿ ಪ್ರವೇಶಿಸುವ ಐದು ರಸ್ತೆಗಳಲ್ಲಿ ದಿಗ್ಭಂಧನ ಮುಂದುವರಿಯಲಿದೆ ಎಂದಿದ್ದಾರೆ.

  ಸರಕಾರ ಪೂರ್ವ ಷರತ್ತು ವಿಧಿಸದೆ ಮುಕ್ತ ಹೃದಯದೊಂದಿಗೆ ಮಾತುಕತೆಯ ಪ್ರಸ್ತಾಪ ಮುಂದುವರಿಸಿದರೆ ಆ ಬಗ್ಗೆ ಪರಿಶೀಲಿಸಬಹುದು ಎಂದು ರೈತರು ಸ್ಪಷ್ಟಪಡಿಸಿದ್ದಾರೆ. ರವಿವಾರ ಬೆಳಿಗ್ಗೆ ಸಭೆ ಸೇರಿದ ಸ್ವರಾಜ್ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್ ಸಹಿತ ರೈತ ಸಂಘಟನೆಯ 30ಕ್ಕೂ ಹೆಚ್ಚು ಮುಖಂಡರನ್ನೊಳಗೊಂಡ ಸಮಿತಿ , ಪೂರ್ವಷರತ್ತಿನ ಸಹಿತದ ಪ್ರಸ್ತಾವನೆಯನ್ನು ತಿರಸ್ಕರಿಸಲು ನಿರ್ಧರಿಸಿದೆ.

    ದಿಲ್ಲಿಯಲ್ಲಿ ಬೃಹತ್ ಸಂಖ್ಯೆಯ ಪೊಲೀಸರನ್ನು ನಿಯೋಜಿಸುವ ಮೂಲಕ ಪ್ರತಿಭಟನಾ ನಿರತ ರೈತರ ಮತ್ತು ದಿಲ್ಲಿಯ ಜನತೆಯ ಮನದಲ್ಲಿ ಭೀತಿಯ ವಾತಾವರಣ ಸೃಷ್ಟಿಸಲಾಗಿದೆ ಎಂದು ರೈತರು ಹೇಳಿದ್ದಾರೆ.

ಕೇಂದ್ರ ಸರಕಾರ ರೈತರ ಮುಖಂಡರೊಂದಿಗೆ ಡಿಸೆಂಬರ್ 3ರಂದು ಮಾತುಕತೆಗೆ ಸಿದ್ಧವಿದೆ. ಅದಕ್ಕೂ ಮೊದಲು ಮಾತುಕತೆ ನಡೆಯಬೇಕೆಂದು ರೈತರು ಬಯಸಿದರೆ, ಅವರು ನಿಯೋಜಿತ ಸ್ಥಳಕ್ಕೆ ತೆರಳಿ ಪ್ರತಿಭಟನೆ ಮುಂದುವರಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದರು.

‘ಶಾ ಮುಂದಿರಿಸಿದ ಷರತ್ತು ರೈತರಿಗೆ ಮಾಡಿದ ಅವಮಾನವಾಗಿದೆ. ಬುರಾರಿಯ ನಿರಂಕಾರಿ ಕ್ರೀಡಾಂಗಣ ಪಾರ್ಕ್ ಅಲ್ಲ, ಅದೊಂದು ತೆರೆದ ಜೈಲು’ ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ನ ಪಂಜಾಬ್ ಘಟಕದ ಅಧ್ಯಕ್ಷ ಸುರ್ಜೀತ್ ಎಸ್ ಫುಲ್ ಹೇಳಿದ್ದಾರೆ.

 ‘ಸರಕಾರ ಮಾತುಕತೆಗೆ ಆಹ್ವಾನಿಸುವಾಗ ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕು. ಷರತ್ತು ವಿಧಿಸುವುದಲ್ಲ ’ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್‌ನ ಪಂಜಾಬ್ ಘಟಕಾಧ್ಯಕ್ಷ ದರ್ಶನ್ ಪಾಲ್ ಹೇಳಿದ್ದಾರೆ. ಷರತ್ತು ವಿಧಿಸುವುದನ್ನು ಸರಕಾರ ನಿಲ್ಲಿಸಬೇಕು. ಮಾತುಕತೆ ಎಂದರೆ ‘ಕಾಯ್ದೆಯಿಂದ ಆಗುವ ಪ್ರಯೋಜನಗಳ ಬಗ್ಗೆ ರೈತರಿಗೆ ವಿವರಿಸುವುದು’ ಎಂದು ಭಾವಿಸುವುದನ್ನೂ ನಿಲ್ಲಿಸಬೇಕು. ಯಾವುದೇ ಪ್ರಸ್ತಾವನೆಯನ್ನು ನೇರವಾಗಿ ಹೇಳಬೇಕು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಪ್ರತಿನಿಧಿ ಹೇಳಿದ್ದಾರೆ.

ಈ ಮಧ್ಯೆ, ಶನಿವಾರ ಬುರಾರಿಯ ನಿರಂಕಾರಿ ಮೈದಾನಕ್ಕೆ ತೆರಳಿರುವ ಕೆಲವು ರೈತರು ಅಲ್ಲಿ ರವಿವಾರ ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.

ಕ್ರೀಡಾಂಗಣದಲ್ಲೇ ಬಂಧನದಲ್ಲಿಡುವ ಸಾಧ್ಯತೆ: ರೈತರ ಆತಂಕ

 ದಿಲ್ಲಿಯ ಅತ್ಯಂತ ದೊಡ್ಡ ಮೈದಾನಗಳಲ್ಲಿ ಒಂದಾಗಿರುವ ಉತ್ತರ ದಿಲ್ಲಿಯ ಸಂತ ನಿರಂಕಾರಿ ಮೈದಾನದಲ್ಲಿ ಪ್ರತಿಭಟನೆ ಮುಂದುವರಿಸುವಂತೆ ದಿಲ್ಲಿಯ ಜಂಟಿ ಪೊಲೀಸ್ ಆಯುಕ್ತ ಸುರೇಂದ್ರ ಸಿಂಗ್ ಯಾದವ್ ಶನಿವಾರ ರೈತರಲ್ಲಿ ಮನವಿ ಮಾಡಿಕೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತರು, ತಮ್ಮನ್ನು ಉಪಾಯದಿಂದ ಮೈದಾನಕ್ಕೆ ಕರೆಸಿಕೊಂಡು, ಮೈದಾನದಲ್ಲೇ ಬಂಧನದಲ್ಲಿಡುವ ತಂತ್ರ ಇದಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಆಯುಕ್ತರ ಆಹ್ವಾನವನ್ನು ತಿರಸ್ಕರಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಪ್ರತಿಭಟನೆ ನಡೆಸುತ್ತಿರುವವರು ದಿಲ್ಲಿಯ ಅತಿಥಿಗಳು ಎಂದಿದ್ದಾರೆ.

ಖಟ್ಟರ್ ಹೇಳಿಕೆಗೆ ಅಕಾಲಿದಳ ಟೀಕೆ

ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳು ನುಸುಳಿರುವ ಬಗ್ಗೆ ತಮ್ಮ ಸರಕಾರಕ್ಕೆ ಮಾಹಿತಿ ದೊರಕಿದೆ ಎಂಬ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹೇಳಿಕೆ ರೈತರಿಗೆ ಮಾಡಿರುವ ಅವಮಾನವಾಗಿದೆ ಎಂದು ಅಕಾಲಿ ದಳ ಟೀಕಿಸಿದೆ.

ರೈತರ ಪ್ರತಿಭಟನೆಗೆ ಕೆಟ್ಟ ಹೆಸರು ತರುವ ಮೂಲಕ ಪ್ರತಿಭಟನೆಯನ್ನು ನಿರ್ದಯವಾಗಿ ಹತ್ತಿಕ್ಕುವ ಹುನ್ನಾರ ಈ ಹೇಳಿಕೆಯ ಹಿಂದಿದೆ ಎಂದು ಅಕಾಲಿದಳ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News