ರೈತರ ಪ್ರತಿಭಟನೆಗೆ ಸ್ವಯಂ ಬೆಂಬಲ ವ್ಯಕ್ತಪಡಿಸಿದ್ದ ಟ್ರ್ಯಾಕ್ಟರ್ ಮೆಕ್ಯಾನಿಕ್ ಕಾರಿನೊಳಗೆ ಜೀವಂತ ದಹನ

Update: 2020-11-29 13:21 GMT

ಚಂಡಿಗಡ: ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆಗಳ ವಿರುದ್ದ ಆಕ್ರೋಶಗೊಂಡಿದ್ದ ರೈತರಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ದಿಲ್ಲಿ ಗಡಿಗೆ ತೆರಳಿದ್ದ ಪಂಜಾಬ್ ನ 55ರ ವಯಸ್ಸಿನ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ ಮಲಗಿದ್ದ ಕಾರು ಬೆಂಕಿಗೆ ಆಹುತಿಯಾಗಿ ಜೀವಂತ ದಹನವಾಗಿರುವ ಘಟನೆ ದಿಲ್ಲಿ-ಹರ್ಯಾಣ ಗಡಿಯ ಬಳಿ ನಡೆದಿದೆ.

ಬೆಂಕಿಗಾಹುತಿಯಾದ ವ್ಯಕ್ತಿಯನ್ನು ಟ್ರ್ಯಾಕ್ಟರ್ ರಿಪೇರಿಮ್ಯಾನ್ ಆಗಿದ್ದ ಜನಕ್ ರಾಜ್ ಎಂದು ಗುರುತಿಸಲಾಗಿದೆ.ಕೇಂದ್ರದ ಕೃಷಿ ಕಾನೂನು ಗಳನ್ನು ವಿರೋಧಿಸಿ ದಿಲ್ಲಿಯ ಬಳಿ ಕ್ಯಾಂಪಿಂಗ್ ಮಾಡುತ್ತಿರುವ ರೈತರು ಬಳಸುತ್ತಿದ್ದ ಟ್ರ್ಯಾಕ್ಟರ್ ಗಳನ್ನು ಸ್ವಯಂ ಪ್ರೇರಣೆಯಿಂದ ರಿಪೇರಿ ಮಾಡಲು ದಿಲ್ಲಿಗೆ ತೆರಳಿದ್ದರು.

ದಿಲ್ಲಿ-ಹರ್ಯಾಣ ಗಡಿ ಬಳಿ ತಡರಾತ್ರಿ ತನಕ ರಿಪೇರಿ ಕೆಲಸ ಮಾಡಿದ್ದ ಜನಕ್ ರಾಜ್ ರಾತ್ರಿ ಕಾರಿನೊಳಗೆ ಮಲಗಿದ್ದರು. ಕಾರಿಗೆ ಬೆಂಕಿ ಬಿದ್ದ ಕಾರಣ ಜನಕರಾಜ್ ಜೀವಂತ ದಹನವಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನಕ್ ರಾಜ್ ಅವರು ಬರ್ನಾಲಾ ಜಿಲ್ಲೆಯ ಧನೋಲುವಾ ಗ್ರಾಮದ ನಿವಾಸಿ.

ಜನಕ್ ರಾಜ್ ನಿಧನಕ್ಕೆ ಶಿರೋಮಣಿ ಅಕಾಲಿದಳ ಪಕ್ಷ ಹಾಗೂ ಸರ್ವ ರೈತರ ಸಂಘಟನೆಯೂ ಶೋಕ ವ್ಯಕ್ತಪಡಿಸಿದೆ.

  ರೈತ ಚಳುವಳಿಯ ಇತಿಹಾಸದಲ್ಲಿ ಅವರ ಹೆಸರನ್ನು ಅಮರಗೊಳಿಸಲಾಗುವುದು ಎಂದು ಅಕಾಲಿದಳ ಹೇಳಿದೆ.

"ಕಿಸಾನ್ ಆಂದೋಲನದಲ್ಲಿ ಟ್ರ್ಯಾಕ್ಟರ್ ರಿಪೇರಿಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಭಾರತೀಯ ರೈತ ಸಂಘದ ಕಠಿಣ ಕೆಲಸಗಾರ ಜನಕ್ ರಾಜ್ ಅವರು ದಿಲ್ಲಿ-ಹರಿಯಾಣ ಗಡಿಯ ಬಳಿ ಅಗ್ನಿ ಅಪಘಾತದಲ್ಲಿ ಸಾವನ್ನಪ್ಪಿದ ವಿಷಯ ತಿಳಿದಾಗ ಬೇಸರವಾಯಿತು. ರೈತ ಚಳುವಳಿಯ ಇತಿಹಾಸದಲ್ಲಿಯೂ ಜನಕ್ ರಾಜ್ ಹೆಸರು ಅಮರವಾಗಲಿದೆ'' ಎಂದು ಎಂ.ಎಸ್. ಕೌರ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News