ಅಫ್ಘಾನ್: ಎರಡು ಆತ್ಮಹತ್ಯಾ ದಾಳಿಗಳಲ್ಲಿ ಕನಿಷ್ಠ 34 ಮಂದಿ ಮೃತ್ಯು

Update: 2020-11-29 16:44 GMT
ಸಾಂದರ್ಭಿಕ ಚಿತ್ರ

ಕಾಬೂಲ್, ನ.29: ಅಫ್ಘಾನಿಸ್ತಾನದಲ್ಲಿ ರವಿವಾರ ನಡೆದ ಎರಡು ಪ್ರತ್ಯೇಕ ಆತ್ಮಹತ್ಯಾ ಬಾಂಬ್ ದಾಳಿಗಳಲ್ಲಿ ಕನಿಷ್ಠ 34 ಮಂದಿ ಸಾವನ್ನಪ್ಪಿದ್ದಾರೆ. ಸೇನಾನೆಲೆ ಹಾಗೂ ಪ್ರಾಂತೀಯ ವರಿಷ್ಠರನ್ನು ಗುರಿಯಿರಿಸಿ ಈ ದಾಳಿಗಳನ್ನು ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಘಜನಿ ಪ್ರಾಂತದಲ್ಲಿ ಸ್ಫೋಟಕಗಳಿಂದ ತುಂಬಿದ ಹಂವೀ ಮಿಲಿಟರಿ ವಾಹನವನ್ನು ಚಲಾಯಿಸಿಕೊಂಡು ಬಂದ ಉಗ್ರನೊಬ್ಬ ಸೇನಾ ಕಮಾಂಡೊ ನೆಲೆಗೆ ನುಗ್ಗಿಸಿ ಸ್ಫೋಟಿಸಿದನೆಂದು ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾ ಕಮಾಂಡೊ ನೆಲೆ ಮೇಲೆ ನಡೆದ ದಾಳಿಯಲ್ಲಿ 10 ಮಂದಿ ಸೈನಿಕರು ಸಾವನ್ನಪ್ಪಿದ್ದು, ಇತರ 9 ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಭದ್ರತಾ ಮಂಡಳಿಯ ಅಧಿಕಾರಿಯೊಬ್ಬರು ದಾಳಿಗೆ ಸಂಬಂಧಿಸಿ ವಿಭಿನ್ನವಾದ ಹೇಳಿಕೆಯನ್ನು ನೀಡಿದ್ದು, ಭದ್ರತಾ ಪಡೆಗಳು ಶಂಕಿತ ಉಗ್ರನಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದಾಗ ಅದು ಸ್ಫೋಟಗೊಂಡಿದ್ದಾಗಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಗೃಹ ಸಚಿವ ತಾರೀಖ್ ಆರಿಯಾನ್ ಅವರು ಆತ್ಮಹತ್ಯಾ ದಾಳಿ ನಡೆದಿರುವುದಾಗಿ ತಿಳಿಸಿದ್ದರಾದರೂ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲವೆಂದು ಮೂಲಗಳು ಹೇಳಿವೆ.

ದಕ್ಷಿಣ ಅಫ್ಘಾನಿಸ್ತಾನದಲ್ಲಿ ನಡೆದ ಇನ್ನೊಂದು ಕಾರ್ ಬಾಂಬ್ ದಾಳಿಯಲ್ಲಿ, ಭಯೋತ್ಪಾದಕನೊಬ್ಬ ಝುಬಾಲ್‌ನ ಪ್ರಾಂತೀಯ ಮಂಡಳಿಯ ವರಿಷ್ಠರ ವಾಹನವ್ಯೂಹದ ಮೇಲೆ ಗುರಿಯಿರಿಸಿ, ದಾಳಿ ನಡೆಸಿದ್ದು ಘಟನೆಯಲ್ಲಿ ಕನಿಷ್ಠ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಮಕ್ಕಳು ಸೇರಿದಂತೆ ಇತರ 21 ಮಂದಿ ಗಾಯಗೊಂಡಿದ್ದಾರೆಂದು ಪ್ರಾಂತೀಯ ವಕ್ತಾರ ಗುಲಾಂ ಇಸ್ಲಾಂ ಸಿಯಾಲ್ ತಿಳಿಸಿದ್ದಾರೆ.

ದಾಳಿಯಲ್ಲಿ ಪ್ರಾಂತೀಯ ಮಂಡಳಿಯ ವರಿಷ್ಠ ಅಟ್ಟಾಜನ್ ಹಕ್‌ಬಯಾತ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆದರೆ ಅವರ ಅಂಗರಕ್ಷಕರಲ್ಲೊಬ್ಬರು ಸಾವನ್ನಪ್ಪಿದ್ದಾರೆಂದು ಪ್ರಾಂತೀಯ ಪೊಲೀಸ್ ವಕ್ತಾರ ಹಿಕ್ಮತುಲ್ಲಾ ಕೊಚಾಯ್ ತಿಳಿಸಿದ್ದಾರೆ. ಈ ದಾಳಿಯ ಹೊಣೆಯನ್ನು ತಕ್ಷಣವೇ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ.

ದೇಶದ ದಶಕಗಳಿಗೂ ದೀರ್ಘಕಾಲ ನಡೆಯುತ್ತಿರುವ ಅಂತರ್ಯುದ್ಧವನ್ನು ಕೊನೆಗೊಳಿಸಲು ಅಫ್ಘಾನ್ ಸರಕಾರದ ಪ್ರತಿನಿಧಿಗಳು ಹಾಗೂ ತಾಲಿಬಾನ್ ಬಂಡುಕೋರರ ಪ್ರತಿನಿಧಿಗಳು ಕತರ್‌ನಲ್ಲಿ ಕಳೆದ ವಾರ ಮಾತುಕತೆ ನಡೆಸಿದ್ದು, ಇದಾದ ಕೆಲವೇ ದಿನಗಳ ಬಳಿಕ ಈ ಅವಳಿ ಆತ್ಮಹತ್ಯಾ ದಾಳಿ ನಡೆದಿದೆ.

ಈ ತಿಂಗಳಲ್ಲಿ ಕಾಬೂಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಭೀಕರ ದಾಳಿಯಲ್ಲಿ ಬಹುತೇಕ ವಿದ್ಯಾರ್ಥಿಗಳು ಸೇರಿದಂತೆ 22 ಮಂದಿ ಮೃತಪಟ್ಟ ಘಟನೆಯ ಹೊಣೆಯನ್ನು ಆಫ್ಘಾನಿಸ್ತಾನದಲ್ಲಿನ ಐಸಿಸ್ ಉಗ್ರರು ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News