ಪೆನ್ಸಿಲ್ವೇನಿಯಾ: ಚುನಾವಣೆ ಅಸಿಂಧು ಕೋರಿದ ಟ್ರಂಪ್ ಅರ್ಜಿ ವಜಾ

Update: 2020-11-29 16:55 GMT

ವಾಶಿಂಗ್ಟನ್,ನ.29: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಿಂಧುತ್ವವನ್ನು ಪ್ರಶ್ನಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಸಲ್ಲಿಸಿದ ಅರ್ಜಿಯನ್ನು ಪೆನ್ಸಿಲ್ವೇನಿಯಾ ರಾಜ್ಯದ ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿದೆ. ಇದರೊಂದಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿ ಜೋ ಬೈಡನ್ ಅಧಿಕಾರಕ್ಕೆ ಏರದಂತೆ ತಡೆಯುವ ಟ್ರಂಪ್ ಪಾಳಯದ ಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯುಂಟಾಗಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ರಾಜ್ಯವಾದ ಪೆನ್ಸಿಲ್ವೇನಿಯಾದಲ್ಲಿ ಅಂಚೆ ಮತಗಳನ್ನು ಅಸಿಂಧುಗೊಳಿಸಬೇಕು ಅಥವಾ ಚಲಾವಣೆಯಾದ ಎಲ್ಲಾ ಮತಗಳನ್ನು ರದ್ದುಪಡಿಸಿ, ವಿಜೇತ ಅಭ್ಯರ್ಥಿಯನ್ನು ನಿರ್ಧರಿಸುವ ಅಧಿಕಾರವನ್ನು ರಾಜ್ಯದ ಶಾಸನ ಸಭೆಗೆ ನೀಡಬೇಕೆಂದು ಕೋರಿ ರಿಪಬ್ಲಿಕನ್ ಪಕ್ಷವು ಅರ್ಜಿ ಸಲ್ಲಿಸಿತ್ತು. ಈ ರಾಜ್ಯದಲ್ಲಿ ಬೈಡನ್ ಅವರು 81 ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದರು.

ಪೆನ್ಸಿಲ್ವೇನಿಯಾ ಸರ್ವೋಚ್ಛ ನ್ಯಾಯಾಲಯ ಪೀಠವು ಈ ಎರಡೂ ದಾವೆಗಳನ್ನು, ಅವಿರೋಧವಾಗಿ ತಿರಸ್ಕರಿಸಿದೆ.

ಅಂಚೆಮತಗಳ ಮೂಲಕ ಸಾರ್ವತ್ರಿಕ ಮತದಾನಕ್ಕೆ ಅವಕಾಶ ನೀಡುವ 2019ರ ಪೆನ್ಸಿಲ್ವೇನಿಯಾ ಕಾನೂನು ಸಂವಿಧಾನ ಬಾಹಿರವೆಂದು ಟ್ರಂಪ್ ಬೆಂಬಲಿಗರು ವಾದಿಸಿದ್ದರು. ಆದರೆ, ಈ ಕಾನೂನು ಜಾರಿಗೆ ಬಂದ ಒಂದು ವರ್ಷಕ್ಕೂ ಅಧಿಕ ಸಮಯದ ಬಳಿಕ ಅದರ ವಿರುದ್ಧ ಅರ್ಜಿಯನ್ನು ಸಲ್ಲಿಸಿರುವುದು ತುಂಬಾ ವಿಳಂಬವಾಯಿತೆಂದು ನ್ಯಾಯಾಧೀಶರು ಅಭಿಪ್ರಾಯಿಸಿದರು.

ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಬೈಡನ್ 81 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದನ್ನು ಪೆನ್ಸಿಲ್ವೇನಿಯಾ ಚುನಾವಣಾ ಪ್ರಾಧಿಕಾರವು ಅಧಿಕೃತವಾಗಿ ಪ್ರಮಾಣೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News