ನೈಜೀರಿಯ: ಬೊಕೋ ಹರಾಮ್ ಉಗ್ರರಿಂದ ಕನಿಷ್ಠ 40 ರೈತರ ನರಮೇಧ

Update: 2020-11-29 17:06 GMT

ಮೈದ್‌ಗುರಿ,ನ.29: ಶಂಕಿತ ಬೊಕೋ ಹರಾಮ್ ಉಗ್ರರು, ಉತ್ತರ ನೈಜೀರಿಯದ ಬೊರ್ನೋ ರಾಜ್ಯದಲ್ಲಿ ಕೃಷಿ ಕೊಯ್ಲಿನಲ್ಲಿ ತೊಡಗಿದ್ದ ಕನಿಷ್ಠ 40 ಮಂದಿ ಭತ್ತದ ಕೃಷಿಕರನ್ನು ಹಾಗೂ ಮೀನುಗಾರರನ್ನು ಹತ್ಯೆಗೈದಿದ್ದ್ಜಾರೆಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಭತ್ತದ ಕೃಷಿಗೆ ಹೆಸರಾಗಿರುವ ಬೊರ್ನೋದ ಗಾರಿನ್ ಖ್ವಾಶಾಬೆಯಲ್ಲಿರುವ ಗದ್ದೆಯೊಂದರಲ್ಲಿ ಈ ಹತ್ಯಾಕಾಂಡ ನಡೆದಿದೆ. ಸ್ಥಳೀಯಾಡಳಿತ ಮಂಡಳಿಗಳನ್ನು ಚುನಾಯಿಸಲು ಕಳೆದ 13 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಶನಿವಾರ ರಾಜ್ಯದ ನಿವಾಸಿಗಳು ಮತದಾನ ಮಾಡಿದ್ದು, ಆ ದಿನವೇ ಈ ನರಮೇಧ ನಡೆದಿದೆ.

ಸಶಸ್ತ್ರಧಾರಿ ಉಗ್ರರು ಈ ರೈತರನ್ನು ಸುತ್ತುವರಿದು, ಸಾಮೂಹಿಕವಾಗಿ ಹತ್ಯೆಗೈದರೆಂದು ಮೂಲಗಳು ತಿಳಿಸಿವೆ. ಸಾವಿಗೀಡಾದ ರೈತರ ಸಂಖ್ಯೆ 60ಕ್ಕೇರುವ ಸಾಧ್ಯತೆಯೂ ಇದೆಯೆಂದು ಬೊರ್ನೋ ರಾಜ್ಯದ ಭತ್ತ ಕೃಷಿಕರ ಸಂಘದ ನಾಯಕ ಮಲಾಮ್ ಝಬಾರ್‌ಮರಿ ತಿಳಿಸಿದ್ದಾರೆ.

ನೈಜೀರಿಯದ ಅಧ್ಯಕ್ಷ ಮುಹಮ್ಮದ್ ಬುಹಾರಿ ಅವರು ರೈತರ ನರಮೇಧವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ವಿವೇಕಹೀನ ಹತ್ಯೆಗಳಿಂದ ದೇಶಕ್ಕೆ ಘಾಸಿಯಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News