ಪಾಕ್ ಸೇನೆಯಿಂದ ನನಗೆ ಒತ್ತಡವಿಲ್ಲ: ಇಮ್ರಾನ್

Update: 2020-11-29 17:10 GMT

ಇಸ್ಲಾಮಾಬಾದ್,ನ.29: ರಾಜಕೀಯ ಹಾಗೂ ಆಡಳಿತದಲ್ಲಿ ಪಾಕಿಸ್ತಾನ ಸೇನೆಯ ಹಸ್ತಕ್ಷೇಪದ ಬಗ್ಗೆ ಆ ದೇಶದಲ್ಲಿ ವ್ಯಾಪಕ ಅಸಮಾಧಾನ ಹೊಗೆಯಾಡುತ್ತಿರುವ ನಡುವೆಯೇ, ಸರಕಾರದ ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಸೇನೆಯಿಂದ ತನಗೆ ಯಾವುದೇ ಒತ್ತಡವಿಲ್ಲವೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ರವಿವಾರ ಹೇಳಿದ್ದಾರೆ.

 ಪಾಕಿಸ್ತಾನದ ವಿದೇಶಾಂಗ ನೀತಿಯು ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್ (ಪಿಟಿಐ) ಪಕ್ಷದ ಚುನಾವಣಾ ಪ್ರಣಾಳಿಕೆಯ ಸುತ್ತ ಕೇಂದ್ರೀಕೃತವಾಗಿರುವುದಾಗಿ, ಪ್ರತಿಪಕ್ಷಗಳಿಂದ ಪದೇ ಪದೇ ‘ ಸೇನೆ ನೇಮಿಸಿದ ಪ್ರಧಾನಿ’ ಎಂಬ ಟೀಕೆಗೆ ಒಳಗಾಗಿರುವ ಇಮ್ರಾನ್ ಹೇಳಿದ್ದಾರೆ.

ನಾನು ಮಾಡಲು ಇಷ್ಟ ಪಡದ ಒಂದೇ ಒಂದು ಕೆಲಸವನ್ನು ಕೂಡಾ ಮಾಡುವಂತೆ ತನ್ನನ್ನು ಸೇನೆ ಈ ತನಕ ಬಲವಂತ ಪಡಿಸಿಲ್ಲವೆಂದು ಅವರು ಹೇಳಿದ್ದಾರೆ.

‘‘ ಒಂದು ವೇಳೆ ಪಾಕ್ ಸೇನೆಯು ತನ್ನ ಮೇಲೆ ಒತ್ತಡ ಹೇರಿದ್ದಲ್ಲಿ ತಾನದನ್ನು ಪ್ರತಿರೋಧಿಸುತ್ತಿದ್ದೆ. ಸಮಗ್ರ ವಿದೇಶಾಂಗ ನೀತಿಯು ನನ್ನದಾಗಿದ್ದು, ಅದನ್ನು ಪಿಟಿಐ ಪಕ್ಷದ ಪ್ರಣಾಳಿಕೆ ಜೊತೆ ಪರಿಶೀಲಿಸಿಕೊಳ್ಳಬಹುದಾಗಿದೆ’’ ಎಂದು ಇಮ್ರಾನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆಂದು ನ್ಯೂಸ್ ಇಂಟರ್‌ನ್ಯಾಶನಲ್ ವರದಿ ಮಾಡಿದೆ.

 ‘‘ಯಾವುದೇ ಮುಸ್ಲಿಂ ದೇಶದಲ್ಲಾದರೂ ಸಂಘರ್ಷವುಂಟಾದಾಗ, ನಾವು ಅದರಲ್ಲಿ ಯಾವುದಾದರೂ ಒಂದು ಕಡೆಯ ಪರ ವಹಿಸಬೇಕೆಂಬ ಒತ್ತಡವುಂಟಾಗುತ್ತದೆ. ಆದರೆ ಅದರ ಬದಲು ನಾವು ತಟಸ್ಥರಾಗಿದ್ದುಕೊಂಡು ಮುಸ್ಲಿಂ ದೇಶಗಳನ್ನು ಒಗ್ಗೂಡಿಸುವಲ್ಲಿ ನಮ್ಮ ಪಾತ್ರ ವಹಿಸುತ್ತೇವೆ ಎಂಬುದಾಗಿ ಹೇಳುತ್ತಾ ಬಂದಿದ್ದೇವೆ ’’ ಎಂದು ಇಮ್ರಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News