ಪಾಕ್: ಪ್ರತಿಪಕ್ಷಗಳ ರ‍್ಯಾಲಿಗಳಿಗೆ ನಿಷೇಧ

Update: 2020-11-29 17:16 GMT
Photo: twitter.com/ImranKhanPTI/photo

ಇಸ್ಲಾಮಾಬಾದ್,ನ.29: ತನ್ನ ಸರಕಾರದ ವಿರುದ್ಧ ಪ್ರತಿಪಕ್ಷಗಳು ಒಟ್ಟಾಗಿ ನಡೆಸುತ್ತಿರುವ ಪ್ರತಿಭಟನೆಯಿಂದ ದಿಗ್ಭ್ರಾಂತರಾಗಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ಮುಲ್ತಾನ್ ಮತ್ತಿತರ ನಗರಗಳಲ್ಲಿ ಸರಕಾರಿ ವಿರೋಧಿ ಪ್ರತಿಭಟನೆಗಳನ್ನು ನಡೆಸಲು ಅನುಮತಿ ನೀಡುವುದಿಲ್ಲವೆಂದು ತಿಳಿಸಿದ್ದಾರೆ.

‘‘ಕೊರೋನ ವೈರಸ್ ಅಪಾಯಕಾರಿಯಾಗಿ ಹರಡುತ್ತಿದೆ ಹೀಗಾಗಿ ಪ್ರತಿಪಕ್ಷಗಳು ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ಮುಂದೂಡಬೇಕಾಗಿದೆ’’ ಎಂದು ಖಾನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಪ್ರಮಾಣಿತ ಕಾರ್ಯವಿಧಾನಗಳನ್ನು ಸರಕಾರವು ಕಟ್ಟುನಿಟ್ಟಾಗಿ ಜಾರಿಗೆ ತರಲಿದೆ ಹಾಗೂ ಬೃಹತ್ ಸಭೆಗಳನ್ನು ನಡೆಸಲು ಮಾರ್ಗದರ್ಶಿ ಸೂತ್ರಗಳನ್ನು ಅನುಮಿತಿ ನೀಡದ ಕಾರಣ ಪ್ರತಿಪಕ್ಷಗಳು ರ‍್ಯಾಲಿಗಳನ್ನು ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲವೆಂದು ಇಮ್ರಾನ್ ತಿಳಿಸಿದ್ದಾರೆ.

 ಈ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುವ ಜನರನ್ನು ಜೈಲಿಗೆ ಅಟ್ಟಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.

11 ಪಕ್ಷಗಳ ಒಕ್ಕೂಟವಾದ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಈಗಾಗಲೇ ಗುಜ್ರನ್‌ವಾಲಾ, ಕರಾಚಿ, ಕ್ವೆಟ್ಟಾ ಹಾಗೂ ಪೇಶಾವರಗಳಲ್ಲಿ ಬೃಹತ್ ರ್ಯಾಲಿಗಳನ್ನು ನಡೆಸಿದೆ. ಮುಲ್ತಾನ್‌ನಲ್ಲಿ ನವೆಂಬರ್ 30 ಹಾಗೂ ಲಾಹೋರ್‌ನಲ್ಲಿ ಡಿಸೆಂಬರ್ 12ರಂದು ರ‍್ಯಾಲಿಗಳನ್ನು ನಿಗದಿಪಡಿಸಲಾಗಿತ್ತು.

 ಆದರೆ ಇಮ್ರಾನ್ ಖಾನ್ ಅವರ ಎಚ್ಚರಿಕೆಗೆ ಜಗ್ಗದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಬಿಲಾವಲ್ ಜರ್ದಾರಿ ಅವರು ನವೆಂಬರ್ 30ರಂದು ಮುಲ್ತಾನ್‌ನಲ್ಲಿ ರ‍್ಯಾಲಿಯನ್ನು ನಡೆಸಿಯೇ ಸಿದ್ಧವೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News