ಪ್ರಯೋಗಾಲಯದಲ್ಲಿ ಬೆಳೆಸಲಾದ ಮಾಂಸಕ್ಕೆ ಸಿಂಗಾಪುರದಿಂದ ಬೇಡಿಕೆ

Update: 2020-12-02 17:39 GMT

ಸಿಂಗಾಪುರ, ಡಿ. 2: ಪ್ರಯೋಗಾಲಯದಲ್ಲಿ ಬೆಳೆಸಲಾಗಿರುವ ಕೋಳಿ ಮಾಂಸವನ್ನು ಅವೆುರಿಕದ ‘ಈಟ್ ಜಸ್ಟ್’ ಕಂಪೆನಿಯಿಂದ ಖರೀದಿಸಲು ಸಿಂಗಾಪುರ ಮುಂದಾಗಿದೆ. ‘‘ಇದು ನಮ್ಮ ಪರಿಶುದ್ಧ ಮಾಂಸಕ್ಕೆ ದೊರೆತ ಮೊದಲ ಜಾಗತಿಕ ಅನುಮೋದನೆಯಾಗಿದೆ’’ ಎಂದು ಕಂಪೆನಿ ಹೇಳಿದೆ. ಇದು ಪ್ರಾಣಿಗಳನ್ನು ಹತ್ಯೆ ಮಾಡಿ ಪಡೆದ ಮಾಂಸವಲ್ಲ ಎಂದು ಅದು ತಿಳಿಸಿದೆ.

ಪ್ರಾಣಿಗಳನ್ನು ಹತ್ಯೆ ಮಾಡಿ ಪಡೆಯುವ ಮಾಂಸವು ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುವುದರಿಂದ ಪರ್ಯಾಯ ಮಾಂಸಕ್ಕಾಗಿ ಬೇಡಿಕೆ ಹೆಚ್ಚಾಗಿತ್ತು. ಬಿಯಾಂಡ್ ಮೀಟ್ ಇಂಕ್ ಮತ್ತು ಇಂಪಾಸಿಬಲ್ ಫೂಡ್ಸ್ ಎಂಬ ಕಂಪೆನಿಗಳು ಜನಪ್ರಿಯಗೊಳಿಸಿರುವ ಸಸ್ಯಾಧಾರಿತ ಮಾಂಸಗಳು ಈಗ ಸೂಪರ್‌ಮಾರ್ಕೆಟ್‌ಗಳಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ಆದರೆ, ಪ್ರಯೋಗಾಲಯದಲ್ಲಿ ಪ್ರಾಣಿಗಳ ಸ್ನಾಯು ಕೋಶಗಳಿಂದ ಬೆಳೆಸಲಾದ ‘ಶುದ್ಧ’ ಅಥವಾ ‘ಮಾಂಸ ಕೃಷಿ ಮೂಲಕ ಬೆಳೆಸಲಾದ ಮಾಂಸ’ ಈಗ ಪ್ರಾಥಮಿಕ ಹಂತದಲ್ಲಷ್ಟೇ ಇದೆ. ಈ ಮಾಂಸ ಬೆಳೆಸಲು ತಗಲುವ ವೆಚ್ಚ ಅಧಿಕವಾಗಿದೆ.

‘‘ಮಾನವರ ಸುರಕ್ಷಿತ ಸೇವನೆಗಾಗಿ ಪ್ರಾಣಿಗಳ ಸ್ನಾಯುಗಳ ಕೋಶಗಳಿಂದ ನೇರವಾಗಿ ಬೆಳೆಸಲಾಗಿರುವ ನೈಜ ಮತ್ತು ಅತ್ಯುನ್ನತ ಗುಣಮಟ್ಟದ ಮಾಂಸಕ್ಕೆ ಮೊದಲ ಜಾಗತಿಕ ಮನ್ನಣೆ ಲಭಿಸಿದೆ. ಮುಂದಿನ ದಿನಗಳಲ್ಲಿ ನಾವು ಸಿಂಗಾಪುರದಲ್ಲಿ ಮಾಂಸ ಬೆಳೆಸುವ ಸಣ್ಣ ಪ್ರಮಾಣದ ವಾಣಿಜ್ಯ ಘಟಕವೊಂದನ್ನು ಆರಂಭಿಸಲಿದ್ದೇವೆ’’ ಎಂದು ‘ಈಟ್ ಜಸ್ಟ್’ ಬುಧವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News