ವಿವಾದಾತ್ಮಕ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ: ಗುರುವಾರ ಕೇಂದ್ರ ಸರಕಾರದೊಂದಿಗೆ ಸಭೆ

Update: 2020-12-02 18:01 GMT

ಹೊಸದಿಲ್ಲಿ, ಡಿ. 2: ವಿವಾದಾತ್ಮಕ ಕೃಷಿ ಕಾಯ್ದೆ ಕುರಿತು ಚರ್ಚೆ ನಡೆಸಲು ಸಮಿತಿ ರಚಿಸುವ ಕೇಂದ್ರ ಸರಕಾರದ ಪ್ರಸ್ತಾವ ನಿರಾಕರಿಸಿದ ದಿನದ ಬಳಿಕ ತಮ್ಮ ಕಾರ್ಯತಂತ್ರ ನಿರ್ಧರಿಸಲು ರೈತ ಸಂಘಟನೆಗಳು ದಿಲ್ಲಿ-ಹರ್ಯಾಣ ಗಡಿಯಲ್ಲಿ ಸಭೆ ಸೇರಿವೆ. ಹಲವು ರಾಜ್ಯಗಳ ರೈತರು ದಿಲ್ಲಿಯ ಹೊರವಲಯದಲ್ಲಿ ಬೀಡು ಬಿಟ್ಟಿರುವುದರೊಂದಿಗೆ ಕಳೆದ ಕೆಲವು ವರ್ಷಗಳಲ್ಲೇ ಅತಿ ದೊಡ್ಡ ರೈತರ ಪ್ರತಿಭಟನೆಯಾಗಿರುವ ಈ ಪ್ರತಿಭಟನೆ ಬುಧವಾರ ಏಳನೇ ದಿನಕ್ಕೆ ಕಾಲಿರಿಸಿದೆ.

ಈ ನಡುವೆ ರೈತರೊಂದಿಗೆ ಬುಧವಾರ ನಡೆದ ಸಭೆಯ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಸಂಪುಟ ಸಹೋದ್ಯೋಗಿ ಪಿಯೂಷ್ ಗೋಯಲ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ನಾವು ಅಕ್ಟೋಬರ್‌ನಲ್ಲೇ ಷರತ್ತುವಾರು ಆಕ್ಷೇಪಣೆ (ಕೃಷಿ ಕಾಯ್ದೆಗಳಿಗೆ)ಯನ್ನು ಲಿಖಿತವಾಗಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದೆವು. ಆದರೆ, ನಾಳೆ ಅದನ್ನು ಮತ್ತೆ ಲಿಖಿತವಾಗಿ ನೀಡಲಾಗುವುದು.

 ನಿನ್ನೆಯ ಸಭೆಯನ್ನು ಗಮನಿಸಿದಾಗ, ಈ ಕಾಯ್ದೆಯನ್ನು ಹಿಂಪಡೆಯುವ ಮನಸ್ಸು ಕೇಂದ್ರ ಸರಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ ಎಂದು ಇಂದಿನ ಸಭೆಯ ಬಳಿಕ ರೈತ ನಾಯಕರೊಬ್ಬರು ಹೇಳಿದ್ದಾರೆ. ಸಚಿವರಾದ ಪಿಯೂಷ್ ಗೋಯಲ್ ಹಾಗೂ ಸೋಮ್‌ಪ್ರಕಾಶ್ 35ಕ್ಕೂ ಹೆಚ್ಚು ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ಬುಧವಾರ ಸಭೆ ನಡೆಸಿದ್ದರು. ಕಾಯ್ದೆಯ ಕುರಿತು ವಿವರವಾದ ವಿಮರ್ಶೆ ಹಾಗೂ ಆಕ್ಷೇಪಗಳನ್ನು ಸಲ್ಲಿಸುವಂತೆ ರೈತರಿಗೆ ತಿಳಿಸಿದ್ದರು. ‘ನಾವು ಸಣ್ಣ ಗುಂಪಿನೊಂದಿಗೆ ಮಾತುಕತೆ ನಡೆಸಲು ಬಯಸಿದ್ದೆವು. ಆದರೆ, ಅವರು (ರೈತರು) ನಾವೆಲ್ಲ ಒಟ್ಟಾಗಿ ಮಾತನಾಡುತ್ತೇವೆ ಎಂದರು.

ನಾವು ಅದಕ್ಕೆ ಗಮನ ಕೊಡಲಿಲ್ಲ. ನಾವು ರೈತರು ಪ್ರತಿಭಟನೆ ಅಂತ್ಯಗೊಳಿಸಲು ಹಾಗೂ ಮಾತುಕತೆಗೆ ಬರಲು ಬಯಸುತ್ತೇವೆ. ಆದರೆ, ಅದು ರೈತರನ್ನು ಅವಲಂಬಿಸಿದೆ’’ ಎಂದು ಕೇಂದ್ರದ ಕೃಷಿ ಸಚಿವ ನರೇಂದ್ರ ತೋಮರ್ ಸಭೆಯ ಬಳಿಕ ಹೇಳಿದ್ದರು. ಹೊಸದಿಲ್ಲಿಯ ಗಡಿ ಪ್ರದೇಶವಲ್ಲದೆ, ರೈತರ ಪ್ರತಿಭಟನೆಗೆ ಗೊತ್ತುಪಡಿಸಲಾದ ದಿಲ್ಲಿ ಹೊರವಲಯದ ಮೈದಾನದಲ್ಲಿ ಕೂಡ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಶುಕ್ರವಾರ ಎರಡನೇ ಸಭೆ ಕರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News