ಫೇಸ್‌ಬುಕ್ ವಿರುದ್ಧ ಅಮೆರಿಕದ 40 ರಾಜ್ಯಗಳಿಂದ ಮೊಕದ್ದಮೆ?

Update: 2020-12-03 16:48 GMT

ವಾಶಿಂಗ್ಟನ್, ಡಿ. 3: ಎದುರಾಳಿಗಳನ್ನು ಬಗ್ಗುಬಡಿಯುವ ಉದ್ದೇಶದ ವ್ಯಾಪಾರ ತಂತ್ರಗಳನ್ನು ಅನುಸರಿಸುವುದನ್ನು (ಆ್ಯಂಟಿ-ಟ್ರಸ್ಟ್) ನಿಷೇಧಿಸುವ ಕಾನೂನನ್ನು ಫೇಸ್‌ಬುಕ್ ಉಲ್ಲಂಘಿಸಿದೆಯೇ ಎಂಬ ಬಗ್ಗೆ ಅಮೆರಿಕದ 40ಕ್ಕೂ ಅಧಿಕ ರಾಜ್ಯಗಳು ತನಿಖೆ ನಡೆಸುತ್ತಿವೆ ಹಾಗೂ ಮುಂದಿನ ವಾರ ಅದರ ವಿರುದ್ಧ ಮೊಕದ್ದಮೆ ಹೂಡಲು ಉದ್ದೇಶಿಸಿವೆ ಎಂದು ಮೂಲಗಳು ಬುಧವಾರ ತಿಳಿಸಿವೆ.

ಇದು ಅಮೆರಿಕದ ಬೃಹತ್ ತಂತ್ರಜ್ಞಾನ ಕಂಪೆನಿಯೊಂದರ ವಿರುದ್ಧ ಈ ವರ್ಷ ದಾಖಲಾಗುವ ಎರಡನೆ ದೊಡ್ಡ ಮೊಕದ್ದಮೆಯಾಗಲಿದೆ. ಇದಕ್ಕೂ ಮೊದಲು, ಅಮೆರಿಕದ ಕಾನೂನು ಇಲಾಖೆಯು ಅಕ್ಟೋಬರ್‌ನಲ್ಲಿ ಗೂಗಲ್ ಕಂಪೆನಿಯ ವಿರುದ್ಧ ಮೊಕದ್ದಮೆ ಹೂಡಿತ್ತು.

ಫೇಸ್‌ಬುಕ್ ವಿರುದ್ಧದ ಮೊಕದ್ದಮೆಗೆ 40ಕ್ಕೂ ಹೆಚ್ಚು ರಾಜ್ಯಗಳು ಸಹಿ ಹಾಕಲಿವೆ ಎಂದು ಮೂಲವೊಂದು ತಿಳಿಸಿದೆ. ಆದರೆ, ಆ ರಾಜ್ಯಗಳ ಹೆಸರುಗಳನ್ನು ಅದು ಬಹಿರಂಗಪಡಿಸಿಲ್ಲ.

ತಮ್ಮ ದೂರಿನಲ್ಲಿ ಈ ರಾಜ್ಯಗಳು ಏನು ಹೇಳಲಿವೆ ಎನ್ನುವುದು ಗೊತ್ತಾಗಿಲ್ಲ. ಆದರೆ, ಫೇಸ್‌ಬುಕ್ ವಿರುದ್ಧ ಯಾವಾಗಲೂ ಕೇಳಿಬರುವ ಒಂದು ಆರೋಪವೆಂದರೆ, ಅದು ತನ್ನ ಸಣ್ಣ ಸಂಭಾವ್ಯ ಎದುರಾಳಿಗಳನ್ನು ದೊಡ್ಡ ಬೆಲೆ ಕೊಟ್ಟು ಖರೀದಿಸುತ್ತದೆ ಎನ್ನುವುದು. ಅದು 2012ರಲ್ಲಿ ಇನ್‌ಸ್ಟಾಗ್ರಾಮ್ ಮತ್ತು 2014ರಲ್ಲಿ ವಾಟ್ಸ್‌ಆ್ಯಪನ್ನು ಖರೀದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News