ಭಾರತದ ಪ್ರಮುಖ ಬ್ರ್ಯಾಂಡ್‌ನ ಜೇನಿನಲ್ಲಿ ಚೀನಾ ಸಕ್ಕರೆ ಪತ್ತೆ !

Update: 2020-12-03 18:11 GMT

ಹೊಸದಿಲ್ಲಿ, ಡಿ. 3: ಕಲಬೆರಕೆ ಜೇನನ್ನು ಪತ್ತೆ ಹಚ್ಚಲು ಬಳಸುವ ಕೆಲವು ಮೂಲಭೂತ ಪರೀಕ್ಷೆಯಿಂದ ನುಣುಚಿಕೊಳ್ಳುವ ಡಾಬರ್, ಪತಂಜಲಿ ಹಾಗೂ ಝಂಡು ಸೇರಿದಂತೆ ಪ್ರಮುಖ ಭಾರತೀಯ ಬ್ರ್ಯಾಂಡ್‌ಗಳು ಚೀನಾದ ಸುಧಾರಿತ ಸಕ್ಕರೆ ಬಳಸಿದ ಕಲಬೆರಕೆ ಜೇನನ್ನು ಮಾರಾಟ ಮಾಡುತ್ತಿವೆ ಎಂದು ಸೆಂಟರ್ ಫಾರ್ ಸಯನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್ (ಸಿಎಸ್‌ಇ)ನ ಸಂಶೋಧಕರು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಾಬರ್, ಪತಂಜಲಿ ಹಾಗೂ ಝಂಡು ಕಂಪೆನಿಯ ವಕ್ತಾರರು, ತಮ್ಮ ಜೇನು ಕಲಬೆರಕೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಅಲ್ಲದೆ, ಫುಡ್ ಸೇಫ್ಟಿ ಆ್ಯಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ (ಎಫ್‌ಎಸ್‌ಎಸ್‌ಎಐ) ವಿಧಿಸಿದ ನಿಯಂತ್ರಣ ಅಗತ್ಯಗಳನ್ನು ಪೂರೈಸಿದೆ ಎಂದು ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭ ಜೇನು ಮಾರಾಟ ಹೆಚ್ಚಾದ ಹೊರತಾಗಿಯೂ ಲಾಭ ಇಳಿಕೆಯಾಗಿದೆ ಎಂದು ಉತ್ತರಭಾರತದ ಜೇನು ಕೃಷಿಕರು ವರದಿ ಮಾಡಿರುವುದರಿಂದ ಸಂಸ್ಥೆ ತನಿಖೆ ಆರಂಭಿಸಿತ್ತು ಎಂದು ಸಿಎಸ್‌ಇಯ ಪ್ರಧಾನ ನಿರ್ದೇಶಕಿ ಸುನಿತಾ ನರೈನ್ ಹೇಳಿದ್ದಾರೆ. ‘‘ಮೃದು ಪಾನೀಯಗಳ ಬಗ್ಗೆ ನಮ್ಮ 2003 ಹಾಗೂ 2006ರಲ್ಲಿ ತನಿಖೆಯಲ್ಲಿ ಪತ್ತೆಯಾಗಿರುವುದಕ್ಕಿಂತ ಈಗ ಪತ್ತೆಯಾದ ಆಹಾರ ವಂಚನೆ ಅಸಹ್ಯ ಹಾಗೂ ಸುಧಾರಿತ. ಇದುವರೆಗೆ ನಾವು ಪತ್ತೆ ಮಾಡಿರುವುದಕ್ಕಿಂತ ಇದು ನಮ್ಮ ಆರೋಗ್ಯದ ಮೇಲೆ ಹೆಚ್ಚು ಹಾನಿ ಉಂಟು ಮಾಡುತ್ತದೆ’’ ಎಂದು ಬುಧವಾರ ನರೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಹುತೇಕ ಎಲ್ಲ ಜೇನು ಬ್ರಾಂಡ್‌ಗಳು ಸಕ್ಕರೆ ಸಿರಪ್‌ನಿಂದ ಕಲಬೆರಕೆಯಾಗಿದೆ ಎಂದು ಸಿಎಸ್‌ಇ ಅಧ್ಯಯನ ಪತ್ತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News