ಭಾರತೀಯ-ಅಮೆರಿಕನ್ ಗೀತಾಂಜಲಿ ರಾವ್ ಗೆ ಟೈಮ್ ಮ್ಯಾಗಝಿನ್‌ನ ಮೊದಲ ‘ಕಿಡ್ ಆಫ್ ದಿ ಇಯರ್’ ಪ್ರಶಸ್ತಿ

Update: 2020-12-04 15:50 GMT
 ಫೋಟೊ ಕೃಪೆ :twitter.com

ನ್ಯೂಯಾರ್ಕ್,ಡಿ.4: ತಂತ್ರಜ್ಞಾನವನ್ನು ಬಳಸಿ ಕಲುಷಿತ ಕುಡಿಯುವ ನೀರಿನಿಂದ ಹಿಡಿದು ಅಫೀಮು ಚಟ ಮತ್ತು ಸೈಬರ್ ಬೆದರಿಕೆಗಳವರೆಗೆ ವಿವಿಧ ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿ ಅದ್ಭುತ ಕಾರ್ಯಕ್ಕಾಗಿ ಪ್ರತಿಭಾವಂತ ಯುವ ವಿಜ್ಞಾನಿ ಹಾಗೂ ಅನ್ವೇಷಕಿ,15ರ ಹರೆಯದ ಭಾರತೀಯ-ಅಮೆರಿಕನ್ ಗೀತಾಂಜಲಿ ರಾವ್ ಅವರನ್ನು ಪ್ರತಿಷ್ಠಿತ ಟೈಮ್ ಮ್ಯಾಗಝಿನ್ ತನ್ನ ಪ್ರಪ್ರಥಮ ‘ಕಿಡ್ ಆಫ್ ದಿ ಇಯರ್’ ಆಗಿ ಆಯ್ಕೆ ಮಾಡಿದೆ. ರಾವ್ ಕೊಲೊರಾಡೊ ನಿವಾಸಿಯಾಗಿದ್ದಾರೆ.

  ಕುಡಿಯುವ ನೀರಿನಲ್ಲಿಯ ಸೀಸವನ್ನು ಪತ್ತೆ ಹಚ್ಚುವ ಸಾಧನವು ರಾವ್ ಅವರ ಆವಿಷ್ಕಾರಗಳಲ್ಲಿ ಸೇರಿದೆ. ‘ಕೈಂಡ್ಲಿ ’ ಆ್ಯಪ್ ಮತ್ತು ಸೈಬರ್ ಬೆದರಿಕೆಗಳ ಆರಂಭಿಕ ಸಂಕೇತಗಳನ್ನು ಪತ್ತೆ ಹಚ್ಚಲು ಮಷಿನ್ ಲರ್ನಿಂಗ್ ಟೆಕ್ನಾಲಜಿಯನ್ನು ಬಳಸುವ ಕ್ರೋಮ್ ಎಕ್ಸ್‌ಟೆನ್ಶನ್ ಅನ್ನೂ ಅವರು ರೂಪಿಸಿದ್ದಾರೆ.

ಟೈಮ್‌ನ ಈ ಗೌರವಕ್ಕಾಗಿ 5,000ಕ್ಕೂ ಅಧಿಕ ಅಮೆರಿಕ ಮೂಲದ ಅಭ್ಯರ್ಥಿಗಳ ಪೈಕಿ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಜಗತ್ತು ಅದಕ್ಕೆ ಆಕಾರವನ್ನು ನೀಡುವವರಿಗೆ ಸೇರಿದೆ ಎಂದು ಟೈಮ್ ಹೇಳಿದೆ.

ಟೈಮ್ ಸ್ಪೆಷಲ್‌ಗಾಗಿ ಖ್ಯಾತ ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಏಂಜಲಿನಾ ಜೋಲಿ ಅವರಿಗೆ ತನ್ನ ಕೊಲೊರಾಡೊ ನಿವಾಸದಿಂದ ನೀಡಿದ ಆನ್‌ಲೈನ್ ಸಂದರ್ಶನದಲ್ಲಿ ತಾನು ಅನುಸರಿಸುವ ವಿಧಿವಿಧಾನಗಳ ಕುರಿತು ಮಾತನಾಡಿದ ರಾವ್, ‘ಅವಲೋಕಿಸಿ, ಚಿಂತನೆಯನ್ನು ನಡೆಸಿ,ಸಂಶೋಧನೆಯನ್ನು ಮಾಡಿ,ಸೃಷ್ಟಿಸಿ ಮತ್ತು ಸಂವಹನ ನಡೆಸಿ ’ಎಂದು ಹೇಳಿದರು.

 ವೀಡಿಯೊ ಚಾಟ್‌ನಲ್ಲಿ ಇತರ ಯುವಜನರಿಗೆ ಸ್ಫೂರ್ತಿದಾಯಕ ಸಂದೇಶವೊಂದನ್ನು ನೀಡಿದ ರಾವ್,‘ಪ್ರತಿಯೊಂದೂ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಡಿ. ಯಾವುದು ನಿಮ್ಮಲ್ಲಿ ಆಸಕ್ತಿಯನ್ನು ಮೂಡಿಸಿದೆಯೋ ಅದರ ಮೇಲಷ್ಟೇ ಗಮನವನ್ನು ಕೇಂದ್ರೀಕರಿಸಿ. ನಾನು ಅದನ್ನು ಮಾಡಬಲ್ಲೆನಾದರೆ ಪ್ರತಿಯೊಬ್ಬರೂ ಅದನ್ನು ಮಾಡಬಲ್ಲರು’ ಎಂದು ಹೇಳಿದರು.

 ತನ್ನ ಪೀಳಿಗೆಯು ಹಿಂದೆಂದೂ ಕಂಡಿರದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳಿದ ಅವರು, ‘ಆದರೆ ಇದೇ ವೇಳೆ ಈಗಲೂ ಕಾಡುತ್ತಿರುವ ಹಳೆಯ ಸಮಸ್ಯೆಗಳನ್ನೂ ನಾವು ಎದುರಿಸುತ್ತಿದ್ದೇವೆ. ನಾವೀಗ ಜಾಗತಿಕ ಸಾಂಕ್ರಾಮಿಕದ ನಡುವೆ ಇದ್ದೇವೆ ಮತ್ತು ಮಾನವ ಹಕ್ಕು ವಿಷಯಗಳನ್ನೂ ಎದುರಿಸುತ್ತಿದ್ದೇವೆ. ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನದ ಆವಿಷ್ಕಾರದೊಂದಿಗೆ ಸೈಬರ್ ಬೆದರಿಕೆಗಳಂತಹ ಸಮಸ್ಯೆಗಳೂ ನಮ್ಮನ್ನು ಕಾಡುತ್ತಿವೆ. ಈ ಸಮಸ್ಯೆಗಳು ನಾವು ಸೃಷ್ಟಿಸಿದ್ದಲ್ಲ,ಆದರೆ ಈಗ ನಾವು ಅವುಗಳನ್ನು ಬಗೆಹರಿಸಬೇಕಿದೆ ’ಎಂದರು. ವಿಜ್ಞಾನವು ನಿಮ್ಮ ಚಿತ್ತವೃತ್ತಿಯಾಗಿದೆ ಎನ್ನುವುದು ನಿಮಗೆ ಯಾವಾಗ ಗೊತ್ತಾಗಿತ್ತು ಎಂಬ ಜೋಲಿ ಪ್ರಶ್ನೆಗೆ ರಾವ್,‘ಜನರ ಮುಖಗಳಲ್ಲಿ ಮುಗುಳ್ನಗು ಮೂಡಿಸಲು ನಾನು ಸದಾ ಬಯಸುತ್ತಿದ್ದೆ. ಯಾರನ್ನಾದರೂ ಸಂತೋಷವಾಗಿರಿಸುವುದು ನನ್ನ ಪ್ರತಿದಿನದ ಗುರಿಯಾಗಿತ್ತು ಮತ್ತು ಅದು ಶೀಘ್ರವೇ ನಾವು ವಾಸಿಸುವ ಸ್ಥಳದಲ್ಲಿ ಸಕಾರಾತ್ಮಕತೆ ಮತ್ತು ಸಮುದಾಯತ್ವವನ್ನು ನಾವು ಹೇಗೆ ತರಬಹುದು ಎಂಬ ಚಿಂತನೆಗೆ ತಿರುಗಿತ್ತು ’ಎಂದು ಉತ್ತರಿಸಿದರು.

ತಾನು ಎರಡು ಅಥವಾ ಮೂರನೇ ತರಗತಿಯಲ್ಲಿದ್ದಾಗಲೇ ಸಾಮಾಜಿಕ ಬದಲಾವಣೆಯನ್ನು ತರಲು ವಿಜ್ಞಾನವನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಚಿಂತನೆ ನಡೆಸಲು ಆರಂಭಿಸಿದ್ದೆ. ತನಗೆ 10 ವರ್ಷವಾಗಿದ್ದಾಗ,ಡೆನ್ವರ್ ವಾಟರ್ ಕ್ವಾಲಿಟಿ ರೀಸರ್ಚ್ ಲ್ಯಾಬ್‌ನಲ್ಲಿ ಕಾರ್ಬನ್ ನ್ಯಾನೊಟ್ಯೂಬ್ ಸೆನ್ಸರ್ ತಂತ್ರಜ್ಞಾನದಲ್ಲಿ ಸಂಶೋಧನೆ ನಡೆಸಲು ಬಯಸಿರುವುದಾಗಿ ತಾನು ಹೆತ್ತವರಿಗೆ ತಿಳಿಸಿದ್ದೆ ಎಂದು ರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News